ಉಪ ರಾಷ್ಟ್ರಪತಿ ಜಗದೀಪ್ ಧನಕರ್
–ಪಿಟಿಐ ಚಿತ್ರ
ಗುವಾಹಟಿ: ‘ಉಪ ರಾಷ್ಟ್ರಪತಿಯವರ ರಾಜೀನಾಮೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗಮನಿಸಿದರೆ ರಾಜೀನಾಮೆಯು ರಾಜಕೀಯ ಸ್ವರೂಪ ಹೊಂದಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯಿ ಹೇಳಿದ್ದಾರೆ.
‘ಸಾಂವಿಧಾನಿಕವಾಗಿ ರಚನೆಯಾದ ಹುದ್ದೆಯ ಘನತೆ ಕಾಪಾಡಬೇಕಾದರೆ ಅವರು ವಹಿಸಿಕೊಂಡಿದ್ದ ಹುದ್ದೆ ಹಾಗೂ ರಾಜೀನಾಮೆಯಲ್ಲೂ ಅನ್ವಯಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್ ಗಮನಿಸಿದರೆ ರಾಜಕೀಯ ಸ್ವರೂಪದಿಂದಲೇ ರಾಜೀನಾಮೆ ನೀಡಿರುವುದು ಬಯಲಾಗಿದೆ’ ಎಂದು ಗೊಗೊಯಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗೊಗೊಯಿ ಅವರು ತಮ್ಮ ಪೋಸ್ಟ್‌ನಲ್ಲಿ ಎಲ್ಲಿಯೂ ಕೂಡ ಧನಕರ್ ಅವರ ಹೆಸರು ಉಲ್ಲೇಖಿಸಿಲ್ಲ.
‘ಊಹಾಪೋಹಕ್ಕೆ ಉತ್ತರಿಸಿ’
‘ಧನಕರ್ ಅವರು ರಾಜೀನಾಮೆ ನೀಡುವ ಮುನ್ನ ಸುತ್ತಲೂ ಸೃಷ್ಟಿಯಾದ ಸಂದರ್ಭಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಸಾಂವಿಧಾನಿಕವಾದ ಎರಡನೇ ಅತ್ಯುನ್ನತ ಹುದ್ದೆಯ ಗೌರವ ಕಾಪಾಡಬೇಕು ಹಾಗೂ ಬೆಳೆಯುತ್ತಿರುವ ಊಹಾಪೋಹಗಳನ್ನು ಪರಿಹರಿಸಬೇಕು’ ಎಂದು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಆಗ್ರಹಿಸಿದ್ದಾರೆ.
‘ಒಂದೊಮ್ಮೆ ಸರ್ಕಾರವು ಈ ವಿಚಾರದಲ್ಲಿ ಮೌನ ವಹಿಸಿದರೆ ಧನಕರ್ ಅವರು ತಮ್ಮ ಮೌನ ಮುರಿದು ಕಚೇರಿಯ ಘನತೆಯನ್ನು ಎತ್ತಿ ಹಿಡಿಯಬೇಕು’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.
‘ಧನಕರ್ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಪರಿಗಣಿಸುವ ವೇಳೆ ರೈತನ ಮಗ (ಕಿಸಾನ್ ಪುತ್ರ) ಎಂದೇ ಪ್ರಧಾನಿ ನರೇಂದ್ರ ಅವರು ಉತ್ಸಾಹಭರಿತರಾಗಿ ಅನುಮೋದಿಸಿದ್ದರು. ಆದರೆ ಅವರು ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ವಿಳಂಬವಾದ ಹೇಳಿಕೆಯು ಒಳಸಂಚಿನ ಕುರಿತ ಅನುಮಾನವನ್ನು ಹೆಚ್ಚಿಸುತ್ತಿದೆ’ ಎಂದು ಬ್ರಿಟ್ಟಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.