ADVERTISEMENT

ಚೀನೀ ಅತಿಕ್ರಮಣಕ್ಕೆ ಎಚ್ಚರಿಕೆ: ಭಾರತ–ಅಮೆರಿಕದ ರಕ್ಷಣೆ, ವಿದೇಶಾಂಗ ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 20:14 IST
Last Updated 27 ಅಕ್ಟೋಬರ್ 2020, 20:14 IST
2+2 ಸಭೆಯ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಜೈಶಂಕರ್‌ ಜತೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಎಸ್ಪರ್‌ –ಪಿಟಿಐ ಚಿತ್ರ
2+2 ಸಭೆಯ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಜೈಶಂಕರ್‌ ಜತೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಎಸ್ಪರ್‌ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಸಾರ್ವಭೌಮತೆಗೆ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ನೆರವಾಗುವುದಾಗಿ ಅಮೆರಿಕ ಭರವಸೆ ನೀಡಿದೆ. ಪೂರ್ವ ಲಡಾಖ್‌ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಜತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ–ಅಮೆರಿಕ ನಡುವೆ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಾಗ್ದಾನ ನೀಡಲಾಗಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಜತೆಗೆ 2+2 (ಎರಡೂ ದೇಶಗಳ ರಕ್ಷಣೆ ಮತ್ತು ವಿದೇಶಾಂಗ ಸಚಿವರ ಸಭೆ) ಮಾತುಕತೆ ನಡೆಸಿದರು. ಚೀನಾದ ಅತಿಕ್ರಮಣಕಾರಿ ವರ್ತನೆಯೇ ಈ ಮಾತುಕತೆಯ ಮುಖ್ಯ ವಿಷಯವಾಗಿತ್ತು.

ಮೂಲಭೂತ ವಿನಿಮಯ ಮತ್ತು ಸಹಕಾರ ಒಪ್ಪಂದಕ್ಕೆ (ಬಿಎಸಿಎ) ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ 2016ರಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ಸರಣಿಯ ಕೊನೆಯ ಭಾಗ ಬಿಇಸಿಎ ಎನ್ನಲಾಗಿದೆ. ಬಿಇಸಿಎ ಒಪ್ಪಂದದಿಂದಾಗಿ ಎರಡೂ ದೇಶಗಳ ನಡುವಣ ಭೌಗೋಳಿಕ ಮಾಹಿತಿ ವಿನಿಮಯವು ಸಾಂಸ್ಥಿಕ ರೂಪ ಪಡೆದುಕೊಳ್ಳಲಿದೆ. ಈ ಒಪ್ಪಂದದಿಂದಾಗಿ ಭಾರತ–ಅಮೆರಿಕ ನಡುವಣ ರಕ್ಷಣಾ ಸಹಕಾರವು ಹೊಸ ಮಜಲಿಗೆ ಏರಿದೆ.

ADVERTISEMENT

ಪಾಂಪಿಯೊ ಮತ್ತು ಎಸ್ಪರ್‌ ಅವರುಮಾತುಕತೆಗೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಜೂನ್‌ 15ರಂದು ಗಾಲ್ವನ್‌ನಲ್ಲಿ ಹುತಾತ್ಮರಾದ 20 ಯೋಧರು ಸೇರಿ ಭಾರತದ ಸೇನೆಯ ಹುತಾತ್ಮರಿಗೆ ಗೌರವ ಸಲ್ಲಿಸಿದರು. ರಕ್ಷಣೆಗೆ ಸಂಬಂಧಿಸಿದ ವಿಚಾರದಲ್ಲಿ ಭಾರತದ ಜತೆಗೆ ಅಮೆರಿಕ ಗಟ್ಟಿಯಾಗಿ ನಿಲ್ಲಲಿದೆ ಎಂಬ ಪರೋಕ್ಷ ಸಂದೇಶವನ್ನು ಈ ಮೂಲಕ ಅವರು ಚೀನಾಕ್ಕೆ ರವಾನಿಸಿದರು.

ಉತ್ತರದ ಗಡಿಗಳಲ್ಲಿ ಆಕ್ರಮಣಕಾರಿ ನಡವಳಿಕೆಯ ಮೂಲಕ ಭಾರತಕ್ಕೆ ಸವಾಲು ಎಸೆಯಲಾಗಿದೆ ಎಂದು ಮಾತುಕತೆಯ ಆರಂಭದಲ್ಲಿ ರಾಜನಾಥ್‌ ಅವರು ಹೇಳಿದರು. ರಾಜನಾಥ್‌ ಮತ್ತು ಜೈಶಂಕರ್‌ ಅವರು ಚೀನಾವನ್ನು ನೇರವಾಗಿ ಎಲ್ಲಿಯೂ ಉಲ್ಲೇಖಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.