ADVERTISEMENT

ಒಂದು ಕಣ್ಣು ಕಳೆದುಕೊಂಡರೂ ಶೇ 100ರಷ್ಟು ಅಂಗವೈಕಲ್ಯ: ಸುಪ್ರೀಂ ಕೋರ್ಟ್

ವಜ್ರ ಕತ್ತರಿಸುವ ಕೇರಳದ ಕಾರ್ಮಿಕನಿಗೆ ಪರಿಹಾರ ಮೊತ್ತ ಹೆಚ್ಚಳ

ಪಿಟಿಐ
Published 10 ಜನವರಿ 2025, 13:07 IST
Last Updated 10 ಜನವರಿ 2025, 13:07 IST
-
-   

ನವದೆಹಲಿ: ವಜ್ರ ಕತ್ತರಿಸುವುದಕ್ಕೆ ಅಗಾಧ ಕುಶಲತೆ, ಭಾರಿ ನಿಖರತೆಯ ಅಗತ್ಯವಿದೆ. ಈ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿ ಒಂದು ಕಣ್ಣು ಕಳೆದುಕೊಂಡಿದ್ದರೂ, ಆತನದು ಶೇ 100ರಷ್ಟು ಅಂಗವೈಕಲ್ಯ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ವ್ಯಕ್ತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆದೇಶಿಸಿದೆ.

ಕೇರಳದ ಜಯನಂದನ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿರುವ ಸುಪ್ರೀಂ ಕೋರ್ಟ್‌, ಅರ್ಜಿದಾರರಿಗೆ ಶೇ8ರ ಬಡ್ಡಿಯೊಂದಿಗೆ ಒಟ್ಟು ₹15,98,000 ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ.

39 ವರ್ಷದ ಜಯನಂದನ್‌ ಅವರು ಶೇ 65ರಷ್ಟು ಅಂಗವೈಕಲ್ಯ ಹೊಂದಿರುವುದಾಗಿ ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ, ಜಯನಂದನ್‌ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸಂಜಯ ಕರೋಲ್‌ ಹಾಗೂ ಮನಮೋಹನ ಅವರು ಇದ್ದ ನ್ಯಾಯಪೀಠ ಮೇಲ್ಮವನಿ ವಿಚಾರಣೆ ನಡೆಸಿತು.

ADVERTISEMENT

ಜಯನಂದನ್ ಅವರು 2005ರ ಫೆಬ್ರುವರಿ 15ರಂದು ಕುನ್ನಂಕುಳಂ ವಡಂಕೇರಿಗೆ ಬೈಕ್‌ ಮೇಲೆ ತೆರಳುತ್ತಿದ್ದ ವೇಳೆ, ಆಟೊವೊಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.

ತ್ರಿಶ್ಶೂರಿನ ಮೋಟಾರ್ ಅಪಘಾತ ಕ್ಲೇಮುಗಳ ನ್ಯಾಯಮಂಡಳಿಯು ಜಯನಂದನ್‌ ಅವರ ಅಂಗವೈಕಲ್ಯ ಶೇ 49ರಷ್ಟು ಎಂದು ತೀರ್ಮಾನಿಸಿ, ಅವರಿಗೆ ಶೇ8ರ ಬಡ್ಡಿಯೊಂದಿಗೆ ₹8.70 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಪರಿಹಾರ ಮೊತ್ತವನ್ನು ₹10,57,500ಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.