ADVERTISEMENT

ತೆಲಂಗಾಣ ಸಿ.ಎಂ ರೆಡ್ಡಿ ವಿರುದ್ಧ ಸುಪ್ರೀಂ ಕೋರ್ಟ್ ಮತ್ತೇ ಅಸಮಾಧಾನ

ಕ್ರಮ ಕೈಗೊಳ್ಳದೇ ನಾವು ತಪ್ಪು ಮಾಡಿದೆವಾ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 15:53 IST
Last Updated 3 ಏಪ್ರಿಲ್ 2025, 15:53 IST
–
   

ನವದೆಹಲಿ: ‘‘ಬಿಆರ್‌ಎಸ್‌ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರೂ ಅವರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದಿಲ್ಲ’ ಎಂಬುದಾಗಿ ವಿಧಾನಸಭೆಯಲ್ಲಿ ಹೇಳಿದ್ದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ವಿರುದ್ಧ ಸುಪ್ರೀಂ ಕೋರ್ಟ್‌ ಗುರುವಾರ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.

‘ನ್ಯಾಯಾಂಗ ನಿಂದನೆಗಾಗಿ ಕ್ರಮ ಕೈಗೊಳ್ಳದೇ ಮತ್ತು ಆಗ ಅವರನ್ನು(ಮುಖ್ಯಮಂತ್ರಿ ರೇವಂತ ರೆಡ್ಡಿ) ಹಾಗೆಯೇ ಬಿಡುವ ಮೂಲಕವೇ ನಾವು ತಪ್ಪು ಮಾಡಿದೆವಾ?’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಆಗಸ್ಟೀನ್ ಜಾರ್ಜ್‌ ಮಸೀಹ್‌ ಅವರು ಇದ್ದ ಪೀಠ ಹೇಳಿದೆ.

ಪಕ್ಷಾಂತರ ಮಾಡಿರುವ ಬಿಆರ್‌ಎಸ್‌ನ 10 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ತೆಲಂಗಾಣ ವಿಧಾನಸಭಾಧ್ಯಕ್ಷ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕುರಿತ ಮೇಲ್ಮನವಿಗಳ ವಿಚಾರಣೆ ವೇಳೆ, ಈ ಮಾತು ಹೇಳಿರುವ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಿದೆ.

ADVERTISEMENT

ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿನ ಪ್ರಕರಣದಲ್ಲಿ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರಿಗೆ ಕಳೆದ ವರ್ಷ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದ್ದರ ಬಗ್ಗೆ ರೇವಂತ ರೆಡ್ಡಿ ಹೇಳಿಕೆ ನೀಡಿದ್ದರು. ರೆಡ್ಡಿ ಅವರ ಹೇಳಿಕೆಗೆ ಆಗ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಸಂಗತಿಯನ್ನು ಪ್ರಸ್ತಾಪಿಸಿದ ನ್ಯಾಯಪೀಠ, ‘ಈ ಹಿಂದಿನ ಅನುಭವದ ಆಧಾರದ ಮೇಲೆ ಮುಖ್ಯಮಂತ್ರಿ ಸ್ವಲ್ಪ ಮಟ್ಟಿನ ಸಂಯಮ ತೋರಬೇಕಿತ್ತು’ ಎಂದು ವಿಧಾನಸಭಾಧ್ಯಕ್ಷರ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಉದ್ಧೇಶಿಸಿ ಹೇಳಿತು.

ಬಿಆರ್‌ಎಸ್‌ ನಾಯಕ ಪಾಡಿ ಕೌಶಿಕ್‌ ರೆಡ್ಡಿ ಪರ ಹಾಜರಿದ್ದ ಹಿರಿಯ ವಕೀಲ ಸಿ.ಎ.ಸುಂದರಮ್,‘ಈ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ಪ್ರಸ್ತಾಪಿಸುವುದು ಬೇಡ ಎಂದು ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದ ಬಿಆರ್‌ಎಸ್‌ ಶಾಸಕರೊಬ್ಬರು ಹೇಳಿದ್ದರು. ಆದರೂ, ಮುಖ್ಯಮಂತ್ರಿ ಈ ಹೇಳಿಕೆ ನೀಡಿದರು’ ಎಂದು ಪೀಠಕ್ಕೆ ತಿಳೀಸಿದರು.

‘ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡಿದ್ದರೂ, ವಿಧಾನಸಭಾಧ್ಯಕ್ಷ ಏನೂ ಹೇಳಲಿಲ್ಲ’ ಎಂದೂ ಸುಂದರಮ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ,‘ಶಾಸಕರ ಅನರ್ಹತೆ ಕೋರುವ ಅರ್ಜಿಗಳ ಕುರಿತು ತೀರ್ಮಾನವನ್ನೇ ತೆಗೆದುಕೊಳ್ಳದೇ ಸುಮ್ಮನಿರಬೇಕೇ ಹಾಗೂ ಸಂವಿಧಾನದ 10ನೇ ಪರಿಚ್ಛೇದವನ್ನು ರದ್ದುಗೊಳಿಸಬೇಕೇ’ ಎಂದು ಪೀಠ ಕೇಳಿತು.

ವಿಧಾನಸಭೆ ಸದಸ್ಯರು ಪಕ್ಷಾಂತರ ಮಾಡಿದಲ್ಲಿ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವ ಅವಕಾಶಗಳನ್ನು 10ನೇ ಪರಿಚ್ಛೇದ ಒಳಗೊಂಡಿದೆ.

‘ಇದು ಅಸಾಧಾರಣ ಪ್ರಕರಣವೆಂದು ಪರಿಗಣಿಸಿ, ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳಲು ಕಾಲಮಿತಿ ನಿಗದಿಪಡಿಸಬೇಕು’ ಎಂದು ಸುಂದರಮ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.