ನವದೆಹಲಿ: ‘ಉತ್ತಮ ವಕೀಲರನ್ನು ನೇಮಿಸಿಕೊಳ್ಳುವಷ್ಟು ಹಣ, ಸಾಮರ್ಥ್ಯ ಮೆಹುಲ್ ಚೋಕ್ಸಿಗೆ ಇರುವುದರಿಂದ ಅವರನ್ನು ಗಡೀಪಾರು ಮಾಡುವುದು ಕಷ್ಟ’ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣವನ್ನು ಬಯಲಿಗೆಳೆದ ಉದ್ಯಮಿ ಹರಿಪ್ರಸಾದ್ ಎಸ್.ವಿ ಅಭಿಪ್ರಾಯಪಟ್ಟಿದ್ದಾರೆ.
ಪಿಎನ್‌ಬಿ ಬ್ಯಾಂಕ್‌ನಿಂದ ₹13,850 ಕೋಟಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಿರುವ ಕುರಿತು ಹರಿಪ್ರಸಾದ್ ಅವರು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದಾರೆ.
‘ಗಡೀಪಾರು ಅಷ್ಟು ಸುಲಭದ ಕೆಲಸವಲ್ಲ. ವಿಜಯ್ ಮಲ್ಯ ಮಾಡುತ್ತಿರುವ ಹಾಗೆ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಯುರೋಪಿನಲ್ಲಿ ಉತ್ತಮ ವಕೀಲರನ್ನು ನೇಮಿಸಿಕೊಳ್ಳುವಷ್ಟು ಹಣ ಮೆಹುಲ್ ಬಳಿ ಇದೆ. ಹೀಗಾಗಿ ಭಾರತಕ್ಕೆ ಮರಳಿ ಕರೆತರುವುದು ಸುಲಭ ಎಂದು ನಾನು ಭಾವಿಸುವುದಿಲ್ಲ’ ಎಂದು ಅವರು ಹೇಳಿದರು.
‘ಇದೇ ರೀತಿ ಹಿಂದೆ ಡೊಮಿನಿಕಾ ದೇಶದ ಆಂಟಿಗುವಾದಲ್ಲಿ ಮೆಹುಲ್ ಸಿಕ್ಕಿಬಿದ್ದಿದ್ದರು. ಅವರನ್ನು ಅಲ್ಲಿ ಬಂಧಿಸಲಾಗಿತ್ತು. ಆದರೆ, ಅವರ ಬಳಿ ವಕೀಲರ ಪಡೆಯೇ ಇರುವುದರಿಂದ ಅಲ್ಲಿಂದ ಸುಲಭವಾಗಿ ಬಚಾವಾದರು. ಆದರೆ, ಈ ಬಾರಿ ಹಾಗಾಗದಿರಲಿ ಎಂದು ನಾನು ಆಶಿಸುತ್ತೇನೆ’ ಎಂದರು.
ಬೆಂಗಳೂರು ಮೂಲದ ಉದ್ಯಮಿಯಾಗಿರುವ ಹರಿಪ್ರಸಾದ್ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಕುರಿತು 2016ರ ಜುಲೈನಲ್ಲಿ ಪ್ರಧಾನಮಂತ್ರಿಗಳ ಕಚೇರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
2018ರಲ್ಲಿ ಪತ್ನಿಯೊಂದಿಗೆ ಮೆಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾಗಿದ್ದರು. ಹಗರಣದ ಇನ್ನೊಬ್ಬ ಆರೋಪಿ ನೀರವ್ ಮೋದಿ ಕೂಡ ಪರಾರಿಯಾಗಿದ್ದು, ಸದ್ಯ ಲಂಡನ್ ಜೈಲಿನಲ್ಲಿದ್ದಾರೆ. ಮೆಹುಲ್ ಮತ್ತು ನೀರವ್ ಸಹೋದರ ಸಂಬಂಧಿಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.