
ನವದೆಹಲಿ: ‘ಜನರಿಂದ ಹಣ ದೋಚುವ ‘ಡಿಜಿಟಲ್ ಅರೆಸ್ಟ್’ ಹೆಸರಿನ ವಂಚನೆಯು ದೇಶದಾದ್ಯಂತ ಹಬ್ಬಿಕೊಂಡಿದೆ. ಇದಕ್ಕಾಗಿ ಏಕರೂಪ ತನಿಖೆ ನಡೆಸಬೇಕಾಗಿದೆ. ಆದ್ದರಿಂದ ಈ ಎಲ್ಲ ಪ್ರಕರಣಗಳ ತನಿಖೆಯನ್ನು ನಾವು ಸಿಬಿಐಗೆ ವಹಿಸಲು ಬಯಸಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತು.
‘ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ‘ಡಿಜಿಟಲ್ ಅರೆಸ್ಟ್’ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ಮಾಹಿತಿ ನೀಡಬೇಕು’ ಎಂದಿರುವ ನ್ಯಾಯಾಲಯವು ಈ ಬಗ್ಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್ ಮಾಲ್ಯಾ ಬಾಗ್ಚಿ ಅವರ ಪೀಠ ವಿಚಾರಣೆ ನಡೆಸಿತು.
‘ಇಂಥ ಕೆಲವು ಪ್ರಕರಣಗಳ ಬಗ್ಗೆ ಸಿಬಿಐ ಈಗಾಗಲೇ ತನಿಖೆ ನಡೆಸುತ್ತಿದೆ’ ಎಂದು ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಬಾಗ್ಚಿ, ‘ಎಲ್ಲ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ಬಳಿ ಸಾಕಷ್ಟು ಸಂಪನ್ಮೂಲಗಳಿವೆಯೇ? ಸೈಬರ್ ತಜ್ಞರ ಸಹಕಾರ ಬೇಕಿದ್ದರೆ ತಿಳಿಸಿ’ ಎಂದರು.
‘ಗೃಹ ಇಲಾಖೆಯಲ್ಲಿರುವ ಸೈಬರ್ ತಜ್ಞರ ಸಹಕಾರವನ್ನು ಸಿಬಿಐ ಪಡೆದುಕೊಳ್ಳುತ್ತಿದೆ’ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
‘ಪೊಲೀಸ್ ಇಲಾಖೆಯಲ್ಲಿ ಇಲ್ಲದ, ಹೊರಗಿನ ಸೈಬರ್ ತಜ್ಞರ ಸಹಕಾರ ಬೇಕಿದ್ದರೆ ತಿಳಿಸಿ. ಇಲ್ಲಿ ತನಿಖೆಯ ವ್ಯಾಪ್ತಿ ದೊಡ್ಡದಿದೆ. ಇದೇ ಸಮಸ್ಯೆ. ಇಷ್ಟೊಂದು ದೊಡ್ಡ ಮಟ್ಟದ ತನಿಖೆ ನಡೆಸಲು ಸಿಬಿಐ ತಯಾರಿದೆಯೇ? ಆದ್ದರಿಂದ ಅವರಿಗೆ ಹೆಚ್ಚಿನ ಸಹಕಾರದ ಅಗತ್ಯ ಬೀಳಬಹುದು’ ಎಂದು ನ್ಯಾ. ಬಾಗ್ಚಿ ಅಭಿಪ್ರಾಯಪಟ್ಟರು.
ಡಿಜಿಟಲ್ ಅರೆಸ್ಟ್‌ನಲ್ಲಿ ತಾವು ₹1.5 ಕೋಟಿ ಕಳೆದುಕೊಂಡ ಬಗ್ಗೆ ಹರಿಯಾಣದ ವೃದ್ಧ ದಂಪತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಅ.17ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು ಮತ್ತು ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ನೀಡಿತ್ತು.
ಸೆ.1ರಿಂದ ಸೆ.16ರವರೆಗೆ ದಂಪತಿಯನ್ನು ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಲಾಗಿತ್ತು. ವಂಚಕರು ತಾವು ಸಿಬಿಐ ಮತ್ತು ನ್ಯಾಯಾಲಯದ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನಕಲಿ ಸಹಿ ಇದ್ದ ಸುಳ್ಳು ಆದೇಶ ಪತ್ರವೊಂದನ್ನು ತೋರಿಸಿದ್ದ ವಂಚಕರು, ಹಣ ನೀಡದಿದ್ದರೆ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು.
‘ಸೈಬರ್ ಅಪರಾಧಗಳು ಮತ್ತು ‘ಡಿಜಿಟಲ್ ಅರೆಸ್ಟ್’ನಂಥ ಪ್ರಕರಣಗಳು ಭಾರತದಲ್ಲಿ ನಿರ್ವಹಣೆಯಾಗುತ್ತಿಲ್ಲ. ಈ ಜಾಲದ ಮೂಲ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳಲ್ಲಿದೆ’ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಪೀಠಕ್ಕೆ ತಿಳಿಸಿದರು. ‘ಇದೊಂದು ಅಂತರರಾಷ್ಟ್ರೀಯ ವಿಚಾರ’ ಎಂದು ಪೀಠ ಹೇಳಿತು.
‘ಕೆಲವೊಮ್ಮೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಸೆ ತೋರಿಸಿ ಜನರನ್ನು ಮರುಳು ಮಾಡಲಾಗುತ್ತದೆ. ಜನರು ಆ ದೇಶಗಳಿಗೆ ತಲುಪಿದ ಬಳಿಕ ಸತ್ಯ ಬಯಲಾಗುತ್ತದೆ. ‘ನಿಮ್ಮ ಮೇಲೆ ಹಣ ಸುರಿಯಲಾಗಿದೆ. ಆದ್ದರಿಂದ ನೀವು ಈ ಹಣವನ್ನು ನಮಗೆ ವಾಪಸು ನೀಡಬೇಕು. ಇದಕ್ಕಾಗಿ ಆನ್‌ಲೈನ್ ಮೂಲಕ ಹಣ ಸಂಗ್ರಹಿಸಿ’ ಎನ್ನಲಾಗುತ್ತದೆ. ಜನರ ಪಾಸ್‌ಪೋರ್ಟ್‌ಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲಾಗುತ್ತದೆ ಮತ್ತು ಅವರನ್ನು ಗುಲಾಮರನ್ನಾಗಿ ಇರಿಸಿಕೊಳ್ಳಲಾಗುತ್ತದೆ’ ಎಂದು ತುಷಾರ್ ಮೆಹ್ತ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.