ADVERTISEMENT

ಪಾಕ್‌ ಪರ ಘೋಷಣೆ– ವಿಡಿಯೊ ಮಾಡಿದ ವ್ಯಕ್ತಿಯ ಬಂಧನಕ್ಕೆ ದಿಗ್ವಿಜಯ ಸಿಂಗ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 16:12 IST
Last Updated 27 ನವೆಂಬರ್ 2022, 16:12 IST
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್   

ಇಂದೋರ್‌ : ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ನಕಲಿ ವಿಡಿಯೊ ಮಾಡಿದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಒತ್ತಾಯಿಸಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್ ಅವರು ನಡೆದುಕೊಂಡು ಹೋಗುತ್ತಿರುವ ಯಾತ್ರೆಯ ವಿಡಿಯೊ ಅನ್ನು ಶುಕ್ರವಾರ ಪೋಸ್ಟ್‌ ಮಾಡಿದ್ದಾರೆ. 21 ಸೆಕೆಂಡ್ ಇರುವ ಕ್ಲಿಪ್‌ನಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ. ಈ ಸಮಯದಲ್ಲಿ ಯಾತ್ರೆಯುಖಾರ್ಗೋನ್ ಜಿಲ್ಲೆಯ ಭನ್ಬರದ್ ಮೂಲಕ ಹಾದು ಹೋಗುತ್ತಿತ್ತು ಎನ್ನಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್‌, ಯಾತ್ರೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿಲ್ಲ. ಇದುವರೆಗೂ ನಾನು ಆ ವಿಡಿಯೊ ನೋಡಿಲ್ಲ. ಯಾತ್ರೆ ವೇಳೆ ಟೆರೇಸ್‌ವೊಂದರಿಂದ ಪಾಕಿಸ್ತಾನ್ ಜಿಂದಾಬಾದ್‌ ಎಂಬ ಘೋಷಣೆ ಕೇಳಿಬಂದಿದೆ ಎಂಬ ಮಾಹಿತಿ ಇದೆ. ಈ ನಕಲಿ ವಿಡಿಯೊ ಮಾಡಿರುವವರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.