ಬೆಂಗಳೂರು:ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಆರ್ಯನ್ ಖಾನ್ ಹಾಗೂ ಇತರ ಇಬ್ಬರು, ಅಪರಾಧ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂಥ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅನೇಕ ಸೆಲಿಬ್ರಿಟಿಗಳು ಆರ್ಯನ್ ಖಾನ್ ಪರ ನಿಂತಿದ್ದಾರೆ.
ಈ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದು, ಹೈಕೋರ್ಟ್‌ನಲ್ಲಿ ಆರ್ಯನ್ ಖಾನ್ ಮುಗ್ಧತೆ ಸಾಬೀತಾದ ನಂತರ ಎನ್‌ಸಿಬಿ ಅಂತಹ ತನಿಖಾ ಸಂಸ್ಥೆಗಳ ಉತ್ತರದಾಯಿತ್ವವನ್ನು ಪ್ರಶ್ನೆ ಮಾಡದೇ ಹೋದರೇ ಹಾಗೂ ಅವುಗಳ ದುರ್ಬಳಕೆಯನ್ನು ಪ್ರಶ್ನೆ ಮಾಡದೆ ಇದ್ದರೆ ಇಂದು ಶಾರುಕ್ ಅಂತಹವರ ಮಗನಿಗೆ ಆದ ಪರಿಸ್ಥಿತಿ ಜನಸಾಮಾನ್ಯರಿಗೆ ಬಾರದೇ ಹೋದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
‘ತನಿಖಾ ಸಂಸ್ಥೆಗಳು ಉತ್ತರದಾಯಿಯಾಗಿರದಿದ್ದರೇ ಅದೊಂದು ದೊಡ್ಡ ಜೋಕ್‘ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಆರ್ಯನ್ ಖಾನ್ ಪ್ರಕರಣದಲ್ಲಿ, ಮೂವರು ಆರೋಪಿಗಳಿಗೆ ಅ.28ರಂದು ಜಾಮೀನು ನೀಡಿರುವ ನ್ಯಾಯಮೂರ್ತಿ ಎನ್.ಡಬ್ಲ್ಯು.ಸಾಂಬ್ರೆ ಅವರಿರುವ ಏಕಸದಸ್ಯ ಪೀಠ ಆರ್ಯನ್ ಖಾನ್ ಹಾಗೂ ಇತರರು ಅಪರಾಧ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂಥ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ, ಆರ್ಯನ್ ಖಾನ್ ಸ್ನೇಹಿತರಾದ ಅರ್ಬಾಜ್ ಮರ್ಚಂಟ್ ಹಾಗೂ ಫ್ಯಾಷನ್ ಡಿಸೈನರ್ ಮುನ್ಮೂನ್ ಧಮೇಚಾ ಅವರಿಗೂ ಹೈಕೋರ್ಟ್ ಜಾಮೀನು ನೀಡಿದೆ.
‘ಆರ್ಯನ್ ಖಾನ್, ಅರ್ಬಾಜ್ ಹಾಗೂ ಧಮೇಚಾ ಅವರ ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಆಕ್ಷೇಪಾರ್ಹ ಎನ್ನಬಹುದಾದ ಅಂಶಗಳಿಲ್ಲ. ಅವರ ವಿರುದ್ಧ ಹೊರಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಅಪರಾಧ ಎಸಗಲು ಆರೋಪಿಗಳು ಪಿತೂರಿ ನಡೆಸಿದ್ದರು ಎಂಬುದನ್ನು ಸಹ ಈ ಚಾಟ್‌ಗಳು ತೋರಿಸುತ್ತಿಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಎನ್‌ಸಿಬಿ ದಾಖಲಿಸಿಕೊಂಡಿರುವ ಆರ್ಯನ್‌ಖಾನ್ ತಪ್ಪೊಪ್ಪಿಗೆ ಹೇಳಿಕೆಯನ್ನು ತನಿಖೆ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಎನ್‌ಡಿಪಿಎಸ್ ಕಾಯ್ದೆಯಡಿ ಆತ ಅಪರಾಧ ಎಸಗಿದ್ದಾನೆ ಎಂಬುದಾಗಿ ತೀರ್ಮಾನಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳಬಾರದು’ ಎಂದೂ ಜಾಮೀನು ಆದೇಶದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.