ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ನೇ ಸಾಲಿನ ‘ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಮಂಗಳವಾರ ಪ್ರದಾನ ಮಾಡಿದ್ದು, ರಕ್ತ ಹೆಪ್ಪುಗಟ್ಟದೆ ಇರುವ ಸಮಸ್ಯೆಯಿಂದ ಬಳಲುತ್ತಿರುವ ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ತಲಸ್ಸೇಮಿಯಾದಿಂದ ಬಳಲುತ್ತಿರುವ ಬೆಂಗಳೂರಿನ ಮಂಜುದರ್ಶಿನಿ ಜಿ. ಅವರು ಕೂಡ ಪ್ರಶಸ್ತಿಗೆ ಪಾತ್ರರಾದ 33 ಮಂದಿಯಲ್ಲಿ ಸೇರಿದ್ದಾರೆ.
‘ಈ ಪ್ರಶಸ್ತಿಗಳು ದೂರಗಾಮಿ ಸಾಮಾಜಿಕ ಮಹತ್ವ ಹೊಂದಿವೆ. ಪ್ರಶಸ್ತಿಗೆ ಪಾತ್ರರಾದವರನ್ನು ಅನುಕರಿಸುವ ಮೂಲಕ ಇತರ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅಂಗವಿಕಲರ ಸಬಲೀಕರಣಕ್ಕೆ ನೆರವಾಗಬಹುದು... ಅಂಗವಿಕಲರಿಗೆ ಸಮಾನ ಅವಕಾಶಗಳು ಮತ್ತು ಸೌಲಭ್ಯಗಳು ಸಿಗುವ ಸಮಾಜ ಮಾತ್ರವೇ ಸೂಕ್ಷ್ಮ ಸಂವೇದನೆಯ ಸಮಾಜ ಎಂದು ಕರೆಸಿಕೊಳ್ಳಬಲ್ಲದು’ ಎಂದು ಮುರ್ಮು ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಹೇಳಿದ್ದಾರೆ.
ಸುರೇಶ್ ಹನಗವಾಡಿ ಅವರಿಗೆ ‘ಶ್ರೇಷ್ಠ ದಿವ್ಯಾಂಗಜನ’ ವಿಭಾಗದಲ್ಲಿ ವೈಯಕ್ತಿಕ ಸಾಧನೆಗಾಗಿ, ರಕ್ತ ಹೆಪ್ಪುಗಟ್ಟದೆ ಇರುವ ಸಮಸ್ಯೆ ಎದುರಿಸುತ್ತಿರುವವರಿಗೆ ನೀಡುವ ಆರೈಕೆಯನ್ನು ಸುಧಾರಿಸಲು ನೀಡಿದ ಕೊಡುಗೆಗಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದಲ್ಲಿ ಈ ಸಮಸ್ಯೆಗೆ ಮೊದಲ ಚಿಕಿತ್ಸಾ ಕೇಂದ್ರ ಆರಂಭಿಸಿದ್ದು, ಸರ್ಕಾರದ ಬೆಂಬಲಕ್ಕಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಿರುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವುದು ಇವರ ಸಾಧನೆಗಳ ಪಟ್ಟಿಗೆ ಸೇರಿವೆ.
ಮಂಜುದರ್ಶಿನಿ ಅವರಿಗೆ ‘ಶ್ರೇಷ್ಠ ದಿವ್ಯಾಂಗಜನ’ ವಿಭಾಗದಲ್ಲಿ ವೈಯಕ್ತಿಕ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಮಂಜುದರ್ಶಿನಿ ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿ, ಸ್ನಾತಕೋತ್ತರ ಪದವಿಯಲ್ಲಿ ಐದನೆಯ ರ್‍ಯಾಂಕ್ ಪಡೆದಿದ್ದಾರೆ. ಈಗ ಅವರು ರಾಜ್ಯ ಸರ್ಕಾರದಲ್ಲಿ ಉಪ ನೋಂದಣಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.