ADVERTISEMENT

ಪೌರತ್ವ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಬಿರುಸಿನ ಚರ್ಚೆ

ಪಿಟಿಐ
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST
   

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಯ ಮೇಲೆ ರಾಜ್ಯಸಭೆಯಲ್ಲಿ ಬುಧವಾರ ಬಿರುಸಿನ ಚರ್ಚೆ ನಡೆಯಿತು. ಗೃಹ ಸಚಿವ ಅಮಿತ್ ಶಾ ಮೊದಲು ಮಸೂದೆ ಮಂಡಿಸಿದರು. ಮಸೂದೆಯು ಅಸಾಂವಿಧಾನಿಕ ಎಂದು ವಿರೋಧ ಪಕ್ಷಗಳು ಟೀಕಿಸಿದವು. ಇದಕ್ಕೆ ಶಾ ತಿರುಗೇಟು ನೀಡಿದರು.

‘ಈ ಮಸೂದೆಯು ಅಸಾಂವಿಧಾನಿಕ ಎಂಬ ನೆಲೆಯಲ್ಲಿ ಮತ್ತು ನೈತಿಕತೆಯ ನೆಲೆಯಲ್ಲಿ ಅದನ್ನು ವಿರೋಧಿಸುತ್ತಿದ್ದೇವೆ. ಇದರಲ್ಲಿ ರಾಜಕೀಯ ಇಲ್ಲ. ಈ ಮಸೂದೆಯು ಭಾರತೀಯತೆಯ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಕಾಂಗ್ರೆಸ್‌ನ ಆನಂದ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರವು ನಮಗೆ ರಾಷ್ಟ್ರೀಯತೆ ಮತ್ತು ಭಾರತೀಯತೆಯನ್ನು ಹೇಳಿಕೊಡಬೇಕಾಗಿಲ್ಲ.ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‌ ಮಾಡಿದ್ದಂತಹ ಕಾರ್ಯಗಳನ್ನೇ ಕೇಂದ್ರ ಸರ್ಕಾರವೂ ಮಾಡುತ್ತಿದೆ’ ಎಂದು ಟಿಎಂಸಿ ಸಂಸದ ಡೆರೆಕ್ ಒ ಬ್ರಯಾನ್ ಆರೋಪಿಸಿದರು.

ADVERTISEMENT

‘ಜರ್ಮಿನಿಯಲ್ಲಿ ಯಹೂದಿಗಳನ್ನು ಬಂಧನ ಶಿಬಿರಗಳಲ್ಲಿ ಇರಿಸಲಾಗಿತ್ತು. ಭಾರತದಲ್ಲೂ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.ಭಾರತವು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರ ವ್ಯವಸ್ಥೆಯತ್ತ ಹೋಗುತ್ತಿದೆ. ಸರ್ಕಾರದ ಈಚಿನ ನೀತಿಗಳು ಇದನ್ನು ಸಾಬೀತುಮಾಡಿವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನೀವು (ಬಿಜೆಪಿ) ಈಗ ರಾಷ್ಟ್ರೀಯತೆ ಮತ್ತು ಹಿಂದುತ್ವದ ಪಾಠಶಾಲೆಯಲ್ಲಿ ಕಲಿಯುತ್ತಿದ್ದೀರಿ. ಶಿವಸೇನಾದ ಬಾಳಾ ಠಾಕ್ರೆ ಆ ಪಾಠಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ನಿಮ್ಮಿಂದ ನಾವು ರಾಷ್ಟ್ರೀಯತೆಯ ಪಾಠ ಕಲಿಯಬೇಕಿಲ್ಲ’ ಎಂದು ಶಿವಸೇನಾದ ಸಂಜಯ್ ರಾವುತ್ ಹೇಳಿದರು.

‘ಸಂಸದರಾದ ನಾವು ಅಸಾಂವಿಧಾನಿಕ ಕೆಲಸ ಮಾಡುತ್ತಿದ್ದೇವೆ. ಇದು ನ್ಯಾಯಾಂಗದ ಮುಂದೆ ಹೋಗಲಿದೆ. ಈ ಮಸೂದೆಯನ್ನು ನ್ಯಾಯಾಂಗವು ಕಿತ್ತೊಗೆಯುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಕಾಂಗ್ರೆಸ್‌ನ ಪಿ. ಚಿದಂಬರಂ ಹೇಳಿದರು.

ಶಾ ತಿರುಗೇಟು:‘ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದಂತೆಯೇ ಕಾಂಗ್ರೆಸ್‌ ಸಂಸದರು ಮಾತನಾಡುತ್ತಿದ್ದಾರೆ. ಶಿವಸೇನಾ ತನ್ನ ಬಣ್ಣ ಬದಲಿಸಿದೆ. ಮಹಾರಾಷ್ಟ್ರದ ಜನರ ಎದುರು ಇದಕ್ಕೆ ಉತ್ತರ ನೀಡಬೇಕಾಗುತ್ತದೆ’ ಎಂದು ಅಮಿತ್ ಶಾ ಹೇಳಿದರು.

‘ನನ್ನ ಕುಟುಂಬದ ಏಳು ತಲೆಮಾರು ಭಾರತದಲ್ಲಿ ಜೀವಿಸಿದೆ. ಭಾರತೀಯತೆ ಬಗ್ಗೆ ನನಗೆ ಯಾರೂ ಪಾಠ ಮಾಡುವುದು ಬೇಡ’ ಎಂದು ಶಾ ತಿರುಗೇಟು ನೀಡಿದರು.

‘ಈ ಮಸೂದೆಯಿಂದ ಮುಸ್ಲಿಮರು ಹೆದರಿದ್ದಾರೆ’ ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.

‘ಮುಸ್ಲಿಮರು ಯಾರಿಗೂ ಹೆದರಬೇಕಿಲ್ಲ. ನೊಂದವರಿಗೆ ಪೌರತ್ವ ನೀಡಲು ಈ ಮಸೂದೆ ತರುತ್ತಿದ್ದೇವೆ. ಯಾರದೇ ಪೌರತ್ವ ಕಿತ್ತುಕೊಳ್ಳಲು ಅಲ್ಲ’ ಎಂದು ಶಾ ಹೇಳಿದರು.

‘ದೇಶ ವಿಭಜನೆ ವಿಎಚ್‌ಪಿಯ ಕನಸು’

ಧರ್ಮದ ಅಧಾರದಲ್ಲಿ ದೇಶ ವಿಭಜನೆಗೆ ಕಾಂಗ್ರೆಸ್‌ ಕಾರಣ ಎಂದು ಅಮಿತ್ ಶಾ ಅವರ ಆರೋಪವನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಿರಾಕರಿಸಿದೆ. ಜತೆಗೆ ಧರ್ಮದ ಆಧಾರದಲ್ಲಿ ದೇಶವಿಭಜನೆ ಮಾಡಲು ಒತ್ತಾಯಿಸಿದ್ದು ಹಿಂದೂ ಮಹಾಸಭಾ (ವಿಎಚ್‌ಪಿ) ಎಂದು ಕಾಂಗ್ರೆಸ್‌ ಹೇಳಿದೆ.

‘ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಬೇಕು ಎಂದು ಕಾಂಗ್ರೆಸ್ ಎಲ್ಲೂ ಹೇಳಿಲ್ಲ. ಧರ್ಮದ ಆಧಾರದಲ್ಲಿ ಎರಡು ದೇಶಗಳು ರಚನೆ ಆಗಬೇಕು ಎಂದು ಹೇಳಿದ್ದು ವಿ.ಡಿ.ಸಾವರ್ಕರ್ ಮತ್ತು ಹಿಂದೂ ಮಹಾಸಭಾ. 1937ರಲ್ಲಿ ಅಹಮದಾಬಾದ್‌ನಲ್ಲಿ ಎರಡು ದೇಶಗಳ ನೀತಿಗೆ ಸಂಬಂಧಿಸಿದಂತೆ ವಿಎಚ್‌ಪಿ ನಿರ್ಣಯ ಅಂಗೀಕರಿಸಿತ್ತು’ ಎಂದು ಕಾಂಗ್ರೆಸ್‌ನ ಆನಂದ್‌ ಶರ್ಮಾ ಹೇಳಿದರು.

‘ಅಮಿತ್ ಶಾ ಅವರು ಇತಿಹಾಸದ ಯಾವ ಪುಸ್ತಕವನ್ನು ಓದಿ, ಈ ಮಾತು ಹೇಳಿತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗಬೇಕು ಎಂಬುದು ಸಾವರ್ಕರ್ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಪ್ರತಿಪಾದನೆಯಾಗಿತ್ತು. ಗೃಹಸಚಿವರುಕಾಂಗ್ರೆಸ್‌ನ ಮೇಲೆ ಮಾಡಿರುವ ಆರೋಪವನ್ನು ವಾಪಸ್ ಪಡೆಯಬೇಕು’ ಎಂದು ಕಪಿಲ್ ಸಿಬಲ್ ಆಗ್ರಹಿಸಿದರು.

***

ಇಂಥದ್ದೊಂದು ಬದಲಾವಣೆ ತರುತ್ತೇವೆ ಎಂದು ಲೋಕಸಭಾ ಚುನಾವಣೆಗೂ ಮುನ್ನ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆ ಪ್ರಣಾಳಿಕೆಗೇ ಜನರು ಭಾರಿ ಬಹುಮತ ನೀಡಿದ್ದು

–ಅಮಿತ್‌ ಶಾ, ಗೃಹ ಸಚಿವ

***

ತಮ್ಮದೇ ಪ್ರಣಾಳಿಕೆ ಹೊಂದುವ ಹಕ್ಕು ಎಲ್ಲಾ ಪಕ್ಷಗಳಿಗೆ ಇದೆ. ಆದರೆ, ಪ್ರಣಾಳಿಕೆಯಲ್ಲಿ ಇದ್ದ ಮಾತ್ರಕ್ಕೆ ಅದು ದೇಶದ ಸಂವಿಧಾನಕ್ಕಿಂತ ದೊಡ್ಡದಲ್ಲ

– ಆನಂದ್ ಶರ್ಮಾ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸಂಸದ

***

ಪಾಕಿಸ್ತಾನ, ಅಪ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತರ ರಕ್ಷಣೆಗಾಗಿ ಈ ಮಸೂದೆಯನ್ನು ಜಾರಿಗೆ ತರುವುದು ಅನಿವಾರ್ಯ

– ಜೆ.ಪಿ. ನಡ್ಡಾ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ

***

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುತ್ತಿದ್ದೀರಿ. ಬಾಂಗ್ಲಾ ಪ್ರಧಾನಿ ಇಲ್ಲಿಗೆ ಬಂದಿದ್ದಾಗ ಈ ವಿಷಯವನ್ನೇಕೆ ಪ್ರಸ್ತಾಪಿಸಲಿಲ್ಲ

–ಸಂಜಯ್ ಸಿಂಗ್, ರಾಜ್ಯಸಭೆಯಲ್ಲಿ ಎಎಪಿ ಸಂಸದ

***

ಮುಸ್ಲಿಮರು, ಶ್ರೀಲಂಕಾದಿಂದ ವಲಸೆ ಬಂದಿರುವ ತಮಿಳರು ಮತ್ತು ಭೂತಾನ್‌ನಿಂದ ವಲಸೆ ಬಂದ ಕ್ರೈಸ್ತ ಧರ್ಮೀಯರನ್ನು ಈ ಮಸೂದೆಯಿಂದ ಹೊರಗೆ ಇಟ್ಟಿದ್ದು ಏಕೆ?

–ಪಿ.ಚಿದಂಬರಂ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ

***

ಶ್ರೀಲಂಕಾದಲ್ಲಿ ಎಲ್‌ಟಿಟಿಇ ಮತ್ತು ಸೇನೆ ಮಧ್ಯೆ ನಡೆದ ಯುದ್ಧದಲ್ಲಿ ನಿರಾಶ್ರಿತರಾದವರು ತಮಿಳುನಾಡಿಗೆ ಬಂದಿದ್ದಾರೆ. ಅವರು ಧಾರ್ಮಿಕ ಕಿರುಕುಳದ ಕಾರಣಕ್ಕೆ ಬಂದಿಲ್ಲ

– ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.