ADVERTISEMENT

ಪಾಕ್‌ ಹುಡುಗಿ ಜತೆ ಮದುವೆಗೆ ಅನುಮತಿ ಪಡೆದಿದ್ದೆ: ಯೋಧ ಮುನೀರ್

ಪಿಟಿಐ
Published 4 ಮೇ 2025, 15:43 IST
Last Updated 4 ಮೇ 2025, 15:43 IST
   

ಜಮ್ಮು: ಪಾಕಿಸ್ತಾನದ ಮಹಿಳೆಯೊಂದಿಗೆ ವಿವಾಹವಾಗಿರುವ ಬಗ್ಗೆ ಮಾಹಿತಿ ನೀಡದ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿರುವ ಯೋಧ ಮುನೀರ್ ಅಹ್ಮದ್‌ ಅವರು, ‘ಕಳೆದ ವರ್ಷ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮುಖ್ಯ ಕಚೇರಿಯಿಂದ ಅನುಮತಿ ಪಡೆದ ಒಂದು ತಿಂಗಳ ನಂತರ ವಿವಾಹವಾಗಿದ್ದೆ’ ಎಂದು ಭಾನುವಾರ ತಿಳಿಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಎರಡೂ ಕುಟುಂಬಸ್ಥರು ಸೇರಿ ಮದುವೆ ನಿಶ್ಚಯಿಸಿದ್ದರು. ಸೇವೆಯಿಂದ ವಜಾಗೊಳಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದರು.

ವಿವಾಹಕ್ಕೂ ಮುನ್ನ ನಿಯಮದ ಪ್ರಕಾರ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೆ. ಹೀಗಾಗಿ ಪ್ರಕರಣವನ್ನು ಪುನರ್‌ ಪರಿಶೀಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಸಿಆರ್‌ಪಿಎಫ್‌ ಅನ್ನು ಕೋರಿದರು.

ADVERTISEMENT

‘ನನ್ನ ತಾಯಿಯ ಸಹೋದರನ ಪುತ್ರಿಯನ್ನು ವಿವಾಹವಾಗಿದ್ದೇನೆ. ಅವರು 1947ರ ದೇಶ ವಿಭಜನೆ ಸಂದರ್ಭದಲ್ಲಿ ಜಮ್ಮುವಿನಿಂದ ಪಾಕಿಸ್ತಾನಕ್ಕೆ ಹೋಗಿದ್ದರು’ ಎಂದು ತಿಳಿಸಿದರು.

ತಮ್ಮ ಹೇಳಿಕೆಯನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳಿಗೆ ತೋರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.