ADVERTISEMENT

ಶಾಸಕರ ಅನರ್ಹತೆ: ಸಂಸತ್ತೇ ಕಾಯ್ದೆ ರಚಿಸಲಿ -ಸುಪ್ರೀಂ ಕೋರ್ಟ್

ಅನರ್ಹತೆ ಅರ್ಜಿ ಕಾಲಮಿತಿಯೊಳಗೆ ವಿಲೇವಾರಿ: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 1 ಜುಲೈ 2021, 18:57 IST
Last Updated 1 ಜುಲೈ 2021, 18:57 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಶಾಸಕರ ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಧಾನಸಭೆಯ ಸಭಾಧ್ಯಕ್ಷ ಅಥವಾ ವಿಧಾನಪರಿಷತ್‌ನ ಸಭಾಪತಿಯು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಕೆಲಸವನ್ನು ಶಾಸನಸಭೆಯೇ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

‘ಸಂಸತ್ತು ನಿರ್ಧಾರ ಕೈಗೊಳ್ಳಬೇಕಾದ ವಿಚಾರದಲ್ಲಿ ನಾವು ಕಾನೂನು ರೂಪಿಸುವುದು ಹೇಗೆ ಸಾಧ್ಯ’ ಎಂದುಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ಹೃಷಿಕೇಶ ರಾಯ್‌ ಅವರ ಪೀಠ ಪ್ರಶ್ನಿಸಿದೆ.

ಅನರ್ಹತೆಗೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಸಭಾಧ್ಯಕ್ಷರು ಅಥವಾ ಸಭಾಪತಿ ನಿರ್ದಿಷ್ಟ ಅವಧಿಯೊಳಗೆ ಇತ್ಯರ್ಥಗೊಳಿಸಲು ನಿರ್ದೇಶನ ನೀಡಬೇಕು ಎಂದುಕೋರಿ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ ಸದಸ್ಯ ರಂಜಿತ್‌ ಮುಖರ್ಜಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಸಂವಿಧಾನದ ಹತ್ತನೇ ಪರಿಚ್ಛೇದದ ಅಡಿಯಲ್ಲಿಸಂಸತ್ತು ಮಾತ್ರ ಈ ವಿಚಾರದಲ್ಲಿ ಕಾಯ್ದೆ ರೂಪಿಸಬಹುದು ಎಂದಿತು.

ADVERTISEMENT

ಇಂಥ ಅರ್ಜಿಗಳ ಇತ್ಯರ್ಥಕ್ಕೆ ಗಡುವು ನಿಗದಿಪಡಿಸಬೇಕೆಂಬ ಬಗ್ಗೆ ಮಾತ್ರ ಮನವಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ ಜೇಬರಾಜ್‌ ವಾದಿಸಿದರು.

‘ಈ ವಿಷಯವಾಗಿ, ಕರ್ನಾಟಕದ ಶಾಸಕರ ಪ್ರಕರಣದಲ್ಲಿ ನನ್ನ ಅಭಿಪ್ರಾಯವನ್ನು ಈಗಾಗಲೇ ಹೇಳಿದ್ದೇನೆ. ಆ ಪ್ರಕರಣದಲ್ಲೂ ಹಿರಿಯ ವಕೀಲ ಕ‍ಪಿಲ್‌ ಸಿಬಲ್‌ ಅವರು ಇದೇ ರೀತಿಯ ವಾದ ಮಂಡಿಸಿದ್ದರು. ಆಗಲೂ ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಸತ್ತಿಗೇ ಬಿಟ್ಟಿದ್ದೆವು’ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

ಈ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಓದಿದ್ದೀರೋ ಎಂಬ ನ್ಯಾಯಪೀಠದ ಪ್ರಶ್ನೆಗೆ ಅರ್ಜಿದಾರರ ಪರ ವಕೀಲರು ‘ಇಲ್ಲ’ ಎಂದು ಉತ್ತರಿಸಿದರು.

‘ಮೊದಲು ಅದನ್ನು ಓದಿ ನಂತರ ಬನ್ನಿ’ ಎಂದು ಹೇಳಿದ ಪೀಠವು, ಇನ್ನೆರಡು ವಾರಗಳ ಬಳಿಕ ಈ ವಿಷಯ ಕೈಗೆತ್ತಿಕೊಳ್ಳುವುದಾಗಿತಿಳಿಸಿತು.

ಕರ್ನಾಟಕದ ಶಾಸಕರ ಅನರ್ಹತೆ ಪ್ರಕರಣವನ್ನು2019ರ ನ.13ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಶಾಸಕರೊಬ್ಬರು ಎಷ್ಟು ಸಮಯದವರೆಗೆ ಅನರ್ಹರಾಗಿರುತ್ತಾರೆ ಎಂಬುದನ್ನು ಹೇಳುವ ಅಥವಾ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ಹೇಳಿತ್ತು.

ಕರ್ನಾಟಕ ವಿಧಾನಸಭೆಯ ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, 17 ಶಾಸಕರನ್ನು 2023ರವರೆಗೆ (ವಿಧಾನಸಭೆ ಅವಧಿ ಮುಗಿಯುವವರೆಗೆ) ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸು‍ಪ್ರೀಂ ಕೋರ್ಟ್‌, ಅನರ್ಹಗೊಂಡ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿತ್ತು. ಇದೇ ವೇಳೆಗೆ, ಮರು ಚುನಾವಣೆಯಲ್ಲಿ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರವನ್ನು ಹೊಂದುವಂತಿಲ್ಲ ಎಂದಿತ್ತು.

ಶಾಸಕರ ಖರೀದಿಯಂತಹ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಲಗಾಮು ಹಾಕುವ ದಿಸೆಯಲ್ಲಿ, ಸಂವಿಧಾನದ 10ನೇ ಪರಿಚ್ಛೇದದ ಅಡಿಯಲ್ಲಿ ಕಾನೂನು ರೂಪಿಸಲು ಸಂಸತ್ತು ಪರಿಶೀಲನೆ ನಡೆಸಬೇಕು ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.