ADVERTISEMENT

ವರದಕ್ಷಿಣೆ ನಿಷೇಧ ಕಾಯ್ದೆ ದುರ್ಬಳಕೆ ನೋವು ತಂದಿದೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 14 ಮೇ 2025, 22:30 IST
Last Updated 14 ಮೇ 2025, 22:30 IST
–
   

ನವದೆಹಲಿ: ವೈವಾಹಿಕ ವಿಚಾರಗಳಿಗೆ ಸಂಬಂಧಿಸಿ ದೂರುದಾರ ಪತ್ನಿಯರು ವರದಕ್ಷಿಣೆ ಕಾಯ್ದೆಗಳನ್ನು ದುರ್ಬಳಕೆ ಮಾಡುತ್ತಿರುವ ಪರಿಯನ್ನು ನೋಡಿ ನ್ಯಾಯಾಲಯ ತೀವ್ರವಾಗಿ ನೊಂದಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಪತಿಯ ವಯಸ್ಸಾದ ಪಾಲಕರು, ದೂರದ ಸಂಬಂಧಿಗಳು, ಮದುವೆ ನಂತರ ಪ್ರತ್ಯೇಕವಾಗಿಯೇ ವಾಸ ಮಾಡುತ್ತಿರುವ ಆತನ ಸಹೋದರಿಯರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿ, ತೊಂದರೆ ನೀಡುವ ದುರುದ್ದೇಶದಿಂದ ವರದಕ್ಷಿಣೆ ನಿಷೇಧ ಕಾಯ್ದೆಗಳ ದುರ್ಬಳಕೆ ಹೆಚ್ಚುತ್ತಿದೆ’ ಎಂದೂ ಆತಂಕ ವ್ಯಕ್ತಪಡಿಸಿದೆ. 

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸತೀಶ್ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠ, ಮಂಗಳವಾರ ನೀಡಿರುವ ತೀರ್ಪಿನಲ್ಲಿ ಈ ಮಾತು ಹೇಳಿದೆ.

ADVERTISEMENT

‘ಪತಿಯ ಸಂಬಂಧಿಕರ ಹೆಸರನ್ನು ದೂರಿನಲ್ಲಿ ಸೇರಿಸುತ್ತಾ ಹೋಗುವ ಪ್ರವೃತ್ತಿ ಹೆಚ್ಚುತ್ತಿರುವುದು ದೂರುದಾರ ಪತ್ನಿ ಅಥವಾ ಆಕೆಯ ಕುಟುಂಬಸ್ಥರು ಮಾಡುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ. ವರದಕ್ಷಿಣೆ ಕಿರುಕುಳದಿಂದ ಮಹಿಳೆಯನ್ನು ರಕ್ಷಿಸುವುದಕ್ಕಾಗಿ ರೂಪಿಸಿರುವ ಕಾಯ್ದೆಯ ಉದ್ದೇಶವನ್ನೇ ಇಂತಹ ಪ್ರವೃತ್ತಿ ದುರ್ಬಲಗೊಳಿಸುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.

ವಿಚಾರಣಾ ನ್ಯಾಯಾಲಯ ತಮಗೆ ಶಿಕ್ಷೆ ನೀಡಿರುವುದನ್ನು ಎತ್ತಿ ಹಿಡಿದು ಅಲಹಾಬಾದ್‌ ಹೈಕೋರ್ಟ್‌ 2018ರ ನವೆಂಬರ್ 14ರಂದು ನೀಡಿದ್ದ ಆದೇಶ ಪ್ರಶ್ನಿಸಿ ಲಖನೌದ ರಾಜೇಶ್ ಛಡ್ಡಾ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜೇಶ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ದೂರುದಾರ ಮಹಿಳೆ ಮತ್ತು ಆಕೆಯ ತಂದೆ ನೀಡಿದ ಹೇಳಿಕೆಗಳನ್ನು ಹೊರತುಪಡಿಸಿದಂತೆ, ಪತಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವಂತೆ ಯಾವುದೇ ಸಾಕ್ಷ್ಯಗಳನ್ನು ದೂರುದಾರ ಮಹಿಳೆ ಒದಗಿಸಿಲ್ಲ’ ಎಂದು ಪೀಠ ಹೇಳಿದೆ.

ಪ್ರತಿವಾದಿಯು (ರಾಜೇಶ್‌) ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ, ಪ್ರತಿವಾದಿ ವಿರುದ್ಧ 1999ರ ಫೆಬ್ರುವರಿ 6ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಪತಿಯೊಂದಿಗೆ ದೂರದಾರ ಮಹಿಳೆ ಒಂದು ವರ್ಷ ಮಾತ್ರ ಒಟ್ಟಿಗೆ ಜೀವಿಸಿದ್ದಾರೆ. ಹೀಗಾಗಿ, ಪತಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ನಿಜವಲ್ಲ ಎಂಬುದು ಕಂಡುಬರುತ್ತದೆ’ ಎಂದೂ ಪೀಠ ಹೇಳಿದೆ.

‘ಪ್ರತಿವಾದಿ ತಪ್ಪಿತಸ್ಥ ಎಂದು ತೋರಿಸುವ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ. ಆದರೆ, ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಅದರ ಆಧಾರದಲ್ಲಿ ನಡೆಯುತ್ತಿರುವ ವಿಚಾರಣೆ ಸಮರ್ಥನೀಯವೇ ಎಂಬುದನ್ನು ಪರಿಷ್ಕರಿಸುವ ವಿವೇಚನಾ ಅಧಿಕಾರ ಹೈಕೋರ್ಟ್‌ ಹೊಂದಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಮೇಲ್ಮನವಿದಾರನ ಮದುವೆ ಅನೂರ್ಜಿತಗೊಂಡಿದೆ ಹಾಗೂ ವಿಚ್ಛೇದನ ಡಿಕ್ರಿ ಕೂಡ ಅಂತಿಮ ಹಂತದಲ್ಲಿದೆ. ಹೀಗಾಗಿ ಮೇಲ್ಮನವಿದಾರನ ವಿರುದ್ಧ ಕೈಗೊಳ್ಳುವ ಯಾವುದೇ ವಿಚಾರಣೆಯು ಕಾನೂನಿನ ದುರ್ಬಳಕೆಗೆ ಸಮವಾಗುತ್ತದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.