ADVERTISEMENT

ರಾಜಕೀಯ ಪಕ್ಷಗಳು ಜನರಿಗೆ ನೀಡುವ ಉಚಿತ ಕೊಡುಗೆಗಳ ಭರವಸೆ ಗಂಭೀರ ವಿಷಯ: ಸುಪ್ರೀಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2022, 7:51 IST
Last Updated 11 ಆಗಸ್ಟ್ 2022, 7:51 IST
   

ನವದೆಹಲಿ: ಚುನಾವಣೆ ಸಂದರ್ಭ ರಾಜಕೀಯ ಪಕ್ಷಗಳು ಜನರಿಗೆ ನೀಡುವ ಉಚಿತ ಕೊಡುಗೆಗಳ ಭರವಸೆ ಮತ್ತು ಅವುಗಳ ವಿತರಣೆ ಗಂಭೀರ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಉಚಿತ ಕೊಡುಗೆಗಳನ್ನು ನೀಡುವ ಬದಲು ಆ ಹಣವನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ವ್ಯಯಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಈ ಮಧ್ಯೆ, ಕಲ್ಯಾಣ ಯೋಜನೆಗಳು ಮತ್ತು ಉಚಿತ ಕೊಡುಗೆಗಳ ನಡುವೆ ವ್ಯತ್ಯಾಸವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಎಎಪಿ ತಿಳಿಸಿದೆ.

ADVERTISEMENT

ಆರ್ಥಿಕತೆಯಿಂದ ಹಣದ ನಷ್ಟವಾಗುತ್ತಿದೆ ಮತ್ತು ಅದನ್ನು ಜನರ ಕಲ್ಯಾಣಕ್ಕಾಗಿ ಸಮತೋಲನಗೊಳಿಸಬೇಕು ಎಂದು ಕೋರ್ಟ್‌ ಹೇಳಿದೆ.

ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಮೂಲಕ ಮತದಾರರಿಗೆರಿಗೆ ಆಮಿಷ ಒಡ್ಡುವುದಕ್ಕೆ ತಡೆ ಹಾಕಬೇಕೆಂದು ಕೋರಿ, ವಕೀಲ ಅಶ್ವಿನಿ ಉಪಾಧ್ಯಾಯ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೀಠವು ನಡೆಸಿತು.

ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಅದರಲ್ಲಿ ನೀಡಿದ ಭರವಸೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು.

‘ಇದು ಸಮಸ್ಯೆಯಲ್ಲ ಎಂದು ಯಾರೂ ಹೇಳುವುದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ. ಉಚಿತ ಕೊಡುಗೆಗಳನ್ನು ಪಡೆಯುತ್ತಿರುವವರೂ ಅದನ್ನು ಬಯಸುತ್ತಾರೆ. ಉಚಿತ ಕೊಡುಗೆಗಳ ವಿಚಾರವಾಗಿ ಜನರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ಕೆಲವರು ಹೇಳಬಹುದು. ಆದರೆ, ಆ ತೆರಿಗೆ ಹಣವನ್ನು ಅಭಿವೃದ್ಧಿ ಪ್ರಕ್ರಿಯೆಗೆ ಬಳಸಬೇಕು. ಆದ್ದರಿಂದ, ಇದು ಗಂಭೀರ ಸಮಸ್ಯೆಯಾಗಿದೆ. ಹಾಗಾಗಿ, ಎರಡೂ ಕಡೆಯವರ ವಾದವನ್ನು ಆಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಹೇಳಿದ್ದಾರೆ.

ಈ ನಡುವೆ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.