ಚೆನ್ನೈ,: ಡಿಎಂಕೆ ಹಿರಿಯ ನಾಯಕ ಮತ್ತು ತಮಿಳುನಾಡು ಸಚಿವ ಕೆ. ಪೊನ್ಮುಡಿ ಅವರು ಶೈವ ಮತ್ತು ವೈಷ್ಣವ ಪಂಥದ ಕುರಿತು ನೀಡಿರುವ ಹೇಳಿಕೆಗೆ ಅವರ ಪಕ್ಷದ ಸಂಸದೆ ಕನಿಮೋಳಿ ಸೇರಿದಂತೆ ಹಲವರು ಟೀಕೆಗೈದಿದ್ದಾರೆ.
ಸಚಿವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಎಂ.ಕೆ .ಸ್ಟಾಲಿನ್ ನೇತೃತ್ವದ ರಾಜ್ಯ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದೆ.
ಸಚಿವರು ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೊ ವೈರಲ್ ಆಗಿದೆ. ರಾಜ್ಯದ ಅರಣ್ಯ ಸಚಿವ ಪೊನ್ಮುಡಿ ಅವರಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ.
ಸಚಿವ ಪೊನ್ಮುಡಿ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ನಾಚಿಕೆಗೇಡಿನ ಸಂಗತಿ.. ಸಿಎಂ ಸ್ಟಾಲಿನ್, ಪೊನ್ಮುಡಿ ಅವರ ಬಂಧನಕ್ಕೆ ಆದೇಶಿಸುತ್ತೀರಾ? ಎಂದು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.
ಪೊನ್ಮುಡಿ ತಮ್ಮ ಹೇಳಿಕೆ ಮೂಲಕ ತಮಿಳುನಾಡಿನ ಮಹಿಳೆಯರನ್ನು ನಿಂದಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಸಂಸದೆ ಕನಿಮೋಳಿ ಕೂಡ ತಮ್ಮ ಪಕ್ಷದ ಮುಖಂಡನನ್ನು ತರಾಟೆಗೆ ತೆಗೆದುಕೊಂಡಿದ್ದು, ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
‘ಪೊನ್ಮುಡಿ ಯಾವುದೇ ಕಾರಣಕ್ಕಾಗಿ ಮಾತನಾಡಿದ್ದರೂ, ಅಂತಹ ಅಸಭ್ಯ ಪದಗಳು ಖಂಡನೀಯ’ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಖಂಡಿಸಿದ್ದಾರೆ.
ಪೊನ್ಮುಡಿಯನ್ನು ಟೀಕಿಸಿ ಕನಿಮೋಳಿ ಮಾಡಿದ ಪೋಸ್ಟ್ ಅನ್ನು ತಿರುಪತಿ ಸ್ವಾಗತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.