ಅಣ್ಣಾಮಲೈ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಚೆನ್ನೈ: ತನ್ನ ದ್ವಿಭಾಷಾ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನು ಪ್ರತಿಪಾದಿಸಿರುವ ತಮಿಳುನಾಡು ಸರ್ಕಾರ, ಶುಕ್ರವಾರ ಮಂಡಿಸಿದ 2025–26ರ ಬಜೆಟ್‌ನಲ್ಲಿ ಸಮಗ್ರ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಯೋಜನೆಗೆ ₹2,152 ಕೋಟಿ ತೆಗೆದಿರಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರವು ಅನುಷ್ಠಾನಕ್ಕೆ ತರದೇ ಇದ್ದರೆ ಎಸ್‌ಎಸ್‌ಎ ಅಡಿಯಲ್ಲಿ ಕೊಡಲಾಗುವ ಅನುದಾನವನ್ನು ನಿರಾಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರವು ತಡೆಹಿಡಿದಿರುವ ₹2,152 ಕೋಟಿ ಮೊತ್ತವನ್ನು ಸರಿದೂಗಿಸಲು ತನ್ನ ಬೊಕ್ಕಸದಿಂದಲೇ ಹಣ ತೆಗೆದಿರಿಸಿದೆ.
ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವನ್ನು ಬಿಟ್ಟುಕೊಟ್ಟರೂ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಸಿದ್ಧವಿಲ್ಲ ಎಂಬ ತನ್ನ ನಿಲುವನ್ನು ರಾಜ್ಯ ಸರ್ಕಾರ ಈ ಮೂಲಕ ಸ್ಪಷ್ಟಪಡಿಸಿದೆ.
ಡಿಎಂಕೆ ಸರ್ಕಾರದ ಹಾಲಿ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಹಣಕಾಸು ಸಚಿವ ತಂಗಂ ತೆನರಸು, 2026ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದರು. ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ 20 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ಅನ್ನು ಒದಗಿಸುವ ಘೋಷಣೆ ಮಾಡಲಾಗಿದೆ. ಡಿಎಂಕೆ ಪಕ್ಷವು 2021ರ ಚುನಾವಣೆಗೂ ಮುನ್ನ ಈ ಭರವಸೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.