ADVERTISEMENT

ನಿರ್ಲಕ್ಷ್ಯ ಆರೋಪ: ವೈದ್ಯನನ್ನೇ ಕೊಲೆ ಮಾಡಿದ ಕೂಲಿ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 9:29 IST
Last Updated 1 ಸೆಪ್ಟೆಂಬರ್ 2019, 9:29 IST
   

ಜೊರ್‌‌ಹಟ್ (ಅಸ್ಸಾಂ): ಟೀ ಎಸ್ಟೇಟ್‌‌ನ ಕೂಲಿ ಕಾರ್ಮಿಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ತೋಟದ ಕೂಲಿ ಕಾರ್ಮಿಕರು 75 ವರ್ಷದ ವೈದ್ಯನನ್ನು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಶನಿವಾರನಡೆದಿದೆ.

ಅಸ್ಸಾಂನ ಟಿಯೋಕ್ ಟೀ ಎಸ್ಟೇಟ್ ಸಮೀಪಆಸ್ಪತ್ರೆಯ ಡಾ.ಡಿಬೆನ್ ದತ್ತ ಕೊಲೆಯಾದವರು. ಚಹಾ ತೋಟದ ಕೂಲಿ ಕಾರ್ಮಿಕ ಸೋಮ್ರ ಮಾಜಿ ಎಂಬಾತನಿಗೆ ಅನಾರೋಗ್ಯ ಉಂಟಾದ ಕಾರಣ ಡಾ.ಡಿಬೆನ್ ದತ್ತ ಅವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮ್ರ ಚಿಕಿತ್ಸೆ ಪಡೆಯುವಾಗಲೇ ಗುಣಮುಖನಾಗದೆ ಸಾವನ್ನಪ್ಪಿದ್ದ.

ವೈದ್ಯ ಡಿಬೆನ್ ಅವರ ನಿರ್ಲಕ್ಷ್ಯವೇ ಸಹೋದ್ಯೋಗಿ ಸಾವಿಗೆಕಾರಣ ಎಂದು ಕಾರ್ಮಿಕರು ಆರೋಪಿಸಿದರು. ನಂತರ ವೈದ್ಯರವಿರುದ್ಧ ಆಸ್ಪತ್ರೆಯ ಎದುರು ಘೇರಾವ್ ನಡೆಸಿದರು. ಈ ಸಮಯದಲ್ಲಿ ಡಾ.ಡಿಬೆನ್ ದತ್ತ ಅವರು ಆಸ್ಪತ್ರೆಯ ಒಳಗೆ ಇದ್ದರು. ಅವರ ಬಳಿಗೆ ತೆರಳಿದ ಕೆಲ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಅಸ್ವಸ್ಥರಾಗಿದ್ದ ವೈದ್ಯರನ್ನು ಅಲ್ಲಿಂದ ರಕ್ಷಿಸಿ ಜೋರ್‌‌ಹಟ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರೋಷನಿ ಅಪರಂಜಿ ಕೊರತಿ ತಿಳಿಸಿದ್ದಾರೆ.

ADVERTISEMENT

ಘಟನೆ ಕುರಿತು ಹೆಚ್ಚುವರಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಸ್ಥಳದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಘಟನೆಗೆ ಖಂಡನೆ

ಟೀ ತೋಟದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿರುವುದು ಖಂಡನಾರ್ಹ, ತಪ್ಪಿತಸ್ಥರ ವಿರುದ್ದ ಶೀಘ್ರವೇ ಕಠಿಣ ಕ್ರಮ ಜರುಗಿಸಬೇಕೆಂದು ಅಸ್ಸಾಂ ಟೀ ತೋಟ ಮಾಲೀಕರ ಸಂಘಟನೆ ಸಿಸಿಪಿಎ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.