ನವದೆಹಲಿ: ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆಯೇ ನ್ಯಾಯಾಲಯದಲ್ಲಿ ವಾಮಾಚಾರ ಎಸಗಿ ಸರ್ಕಾರಿ ನೌಕರನಿಗೆ ಉದ್ದೇಶಪೂರ್ವಕವಾಗಿ ಅವಮಾನವೆಸಗಿದ ಆರೋಪಿ ವೈದ್ಯನಿಗೆ ಕಲಾಪ ಪೂರ್ಣಗೊಳಿಸುವವರೆಗೂ ನ್ಯಾಯಾಲಯದ ಕೊಠಡಿಯಲ್ಲಿ ಇರುವಂತೆ ತೀಜ್ ಹಜಾರಿ ನ್ಯಾಯಾಲಯವು ಸೂಚಿಸಿದೆ.
‘ವೃತ್ತಿಯಲ್ಲಿ ವೈದ್ಯರಾಗಿರುವ ಆರೋಪಿ ಡಾ. ಚಂದರ್ ವಿಭಾಸ್ ಅವರ ವರ್ತನೆಯು ಆಘಾತಕಾರಿಯಾಗಿದೆ. ಅತ್ಯಂತ ವಿದ್ಯಾವಂತ, ಗಣ್ಯವರ್ಗದವರಾಗಿ ವಿನಾಕಾರಣ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಿದ್ದನ್ನು ಒಪ್ಪುವಂತಹದ್ದಲ್ಲ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೆಫಾಲಿ ಬರ್ನಾಲ ಟಂಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2025ರ ಆಗಸ್ಟ್ 11ರಂದು ನ್ಯಾಯಾಲಯದ ಕಲಾಪದ ವೇಳೆ ಆರೋಪಿಯು ತಮ್ಮ ಮೇಲೆ ಅಕ್ಕಿ ಚೆಲ್ಲಿದ್ದನ್ನು ಸಿಬ್ಬಂದಿಯು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಇದರಿಂದ 15ರಿಂದ 20 ನಿಮಿಷಗಳ ಕಲಾಪ ನಡೆದಿರಲಿಲ್ಲ. ಆರೋಪಿ ಪರ ಹಾಜರಾಗಿದ್ದ ವಕೀಲರು ಕೂಡ ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಆರೋಪಿಯನ್ನು ವಿಚಾರಿಸಿದಾಗ, ಕೈಯಲ್ಲಿದ್ದ ಅಕ್ಕಿ ಕೆಳಗೆ ಚೆಲ್ಲಿತ್ತು ಎಂದು ತಿಳಿಸಿದ್ದರು. ಆದರೆ, ನ್ಯಾಯಾಲಯದ ಕಲಾಪಕ್ಕೆ ಅಕ್ಕಿ ಏಕೆ ತೆಗೆದುಕೊಂಡು ಬರಲಾಗಿತ್ತು ಎಂದು ತಿಳಿಸಿರಲಿಲ್ಲ.
ಕ್ಷಮೆಯಾಚನೆ–ದಂಡ: ‘ತನ್ನ ನಡೆಯ ಕುರಿತು ಆರೋಪಿ ವೈದ್ಯನು ಪಶ್ಚಾತ್ತಾಪಪಟ್ಟಿದ್ದು, ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಕಲಾಪ ಮುಗಿಯುವವರೆಗೂ ನಿಲ್ಲುವಂತೆ ಸೂಚಿಸಿ, ₹2 ಸಾವಿರ ದಂಡ ವಿಧಿಸಲಾಗಿದೆ’ ಎಂದು ನ್ಯಾಯಾಲಯವು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.