ADVERTISEMENT

ಅಟಲ್‌ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವೈದ್ಯೆ: ಕಾರಣವೇನು?

ಪಿಟಿಐ
Published 20 ಮಾರ್ಚ್ 2024, 11:13 IST
Last Updated 20 ಮಾರ್ಚ್ 2024, 11:13 IST
<div class="paragraphs"><p>ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ‘ಅಟಲ್ ಸೇತು‘</p></div>

ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ‘ಅಟಲ್ ಸೇತು‘

   

ಪಿಟಿಐ ಚಿತ್ರ

ಥಾಣೆ: ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯೆಯೊಬ್ಬರು ಭಾರತದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ADVERTISEMENT

ಮಹಿಳೆ ಮಾರ್ಚ್ 18ರ ಮಧ್ಯಾಹ್ನ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದರು. ಅಟಲ್‌ ಸೇತುವೆ ಬಳಿ ಟ್ಯಾಕ್ಸಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದ ವೈದ್ಯೆ (38) ಏಕಾಏಕಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಡ್ರೈವರ್‌ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈವರೆಗೂ ಶವ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಮೃತ ಮಹಿಳೆಯ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಡೆತ್ ನೋಟ್‌ ಪತ್ತೆಯಾಗಿದೆ. ‘ ನಾನು 8 ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದು, ಅಟಲ್‌ ಸೇತುವೆಯಿಂದ ಜಿಗಿದು ನನ್ನ ಜೀವನವನ್ನು ಅಂತ್ಯಗೊಳಿಸಲು ಬಯಸುತ್ತೇನೆ. ಟ್ಯಾಕ್ಸಿ ಚಾಲಕ ಸೇರಿದಂತೆ ನನ್ನ ಸಾವಿಗೆ ಯಾರು ಕಾರಣರಲ್ಲ’ ಎಂದು ಸಂತ್ರಸ್ತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ನಡುವೆ ಅದೇ ದಿನ ಥಾಣೆ ಜಿಲ್ಲೆಯ ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾಣೆ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ₹17,840 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ‘ಅಟಲ್ ಸೇತು‘ ಅನ್ನು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಅಟಲ್​ ಸೇತು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, 16.5 ಕಿಮೀ ಸಮುದ್ರದ ಮೇಲೆ ಹಾಗೂ 5.5 ಕಿಮೀ ಭೂಮಿಯ ಮೇಲೆ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.