ADVERTISEMENT

ಚೋಕ್ಸಿ ಭಾರತಕ್ಕೆ ನೇರ ಹಸ್ತಾಂತರ ಇಲ್ಲ: ಡೊಮಿನಿಕಾ ಪ್ರಧಾನಿ

ಆಂಟಿಗುವಾ ಪ್ರಧಾನಿಯ ವಿನಂತಿಯನ್ನು ತಿರಸ್ಕರಿಸಿದ ಡೊಮಿನಿಕಾ ಸರ್ಕಾರ

ಏಜೆನ್ಸೀಸ್
Published 27 ಮೇ 2021, 21:44 IST
Last Updated 27 ಮೇ 2021, 21:44 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ಭಾರತದಿಂದ ಪರಾರಿಯಾದ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಿ ಎಂದು ಡೊಮಿನಿಕಾ ಸರ್ಕಾರವನ್ನು ಆಂಟಿಗುವಾ ಮತ್ತು ಬಾರ್ಬುಡಾ ಸರ್ಕಾರ ಕೋರಿದೆ. ಆದರೆ, ಅದು ಸಾಧ್ಯವಿಲ್ಲ. ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾ ದ್ವೀಪಕ್ಕೇ ಕಳುಹಿಸಲಾಗುವುದು ಎಂದು ಡೊಮಿನಿಕಾ ಹೇಳಿದೆ. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಹೊಂದಿರುವ ಚೋಕ್ಸಿ ಅವರು ಅಲ್ಲಿಂದ ಪರಾರಿಯಾಗಿ ಡೊಮಿನಿಕಾಕ್ಕೆ ಹೋಗಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿದೆ.

ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಅವರು ಡೊಮಿನಿಕಾದ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರಿಟ್‌ ಜತೆಗೆ ನೇರವಾಗಿ ಮಾತನಾಡಿದ್ದಾರೆ. ತಮ್ಮ ದೇಶಕ್ಕೆ ಅವರನ್ನು ಕರೆಸಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ, ನೇರವಾಗಿ ಭಾರತಕ್ಕೆ ಕಳುಹಿಸಿ ಎಂದಿದ್ದರು. ಇದರಿಂದಾಗಿ ಚೋಕ್ಸಿ ಬೇಗನೆ ಭಾರತಕ್ಕೆ ಹಸ್ತಾಂತರವಾಗಬಹುದು ಎಂಬ ನಿರೀಕ್ಷೆ ಮೂಡಿತ್ತು.

₹ 13,500 ಕೋಟಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಚೋಕ್ಸಿ, ಭಾನುವಾರ ಆಂಟಿಗುವಾದಿಂದ ಪರಾರಿಯಾಗಿದ್ದರು. ಹೀಗಾಗಿ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ್ದ ಆಂಟಿಗುವಾ ಮತ್ತು ಬಾರ್ಬುಡಾದ ಪೊಲೀಸರು ಚೋಕ್ಸಿಯ ಆಪ್ತರು ಹಾಗೂ ಸಂಬಂಧಿಕರನ್ನು ವಿಚಾರಿಸುತ್ತಿದ್ದರು.

ADVERTISEMENT

‘ಚೋಕ್ಸಿಯು ದೋಣಿ ಮೂಲಕ ಅಕ್ರಮವಾಗಿ ಡೊಮಿನಿಕಾಗೆ ಪ್ರವೇಶಿಸಿರಬಹುದು. ಆದರೆ ಆತ ಮತ್ತೆ ಇಲ್ಲಿಗೆ ಬರಲು ನಾವು ಒಪ್ಪುವುದಿಲ್ಲ. ಬಂಧನದಿಂದ ತಪ್ಪಿಸಿಕೊಳ್ಳುವ ಮೂಲಕ ಚೋಕ್ಸಿ ತಪ್ಪೆಸಗಿದ್ದಾರೆ’ ಎಂದು ಬ್ರೌನ್ ಹೇಳಿದ್ದಾರೆ.

ಡೊಮಿನಿಕಾ ಸರ್ಕಾರ ಮತ್ತು ಪೊಲೀಸರು ಸಹಕಾರ ನೀಡುತ್ತಿದ್ದು, ಆಂಟಿಗುವಾ ಸರ್ಕಾರವು ಚೋಕ್ಸಿಯನ್ನು ಭಾರತಕ್ಕೆ ಮರಳಿಸುವ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ ಎಂದ ಬ್ರೌನ್ ಹೇಳಿದ್ದಾರೆ.

ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು 2018ರಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಬಯಲಿಗೆ ಬರುವ ಮುನ್ನವೇ ದೇಶ ತೊರೆದಿದ್ದರು. 2019ರಲ್ಲಿ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು. ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಚೋಕ್ಸಿ ವಾಸಿಸುತ್ತಿದ್ದಾರೆ.

ಚೋಕ್ಸಿ 2017ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪಲಾಯನ ಮಾಡುವ ಮೊದಲು, ‘ಹೂಡಿಕೆ ಮಾಡುವ ಮೂಲಕ ಪೌರತ್ವ ಪಡೆಯುವ ಯೋಜನೆ’ಯಡಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿದ್ದರು. ನಂತರ ಹಗರಣ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.