ADVERTISEMENT

ಟ್ರಂಪ್‌ ಗುಣಮುಖ: ಚುನಾವಣಾ ಪ್ರಚಾರ ರ್‍ಯಾಲಿ ನಡೆಸುವ ಇಂಗಿತ

ಸುರಕ್ಷತೆಯೊಂದಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವೈದ್ಯರ ಸಲಹೆ

ಪಿಟಿಐ
Published 9 ಅಕ್ಟೋಬರ್ 2020, 7:13 IST
Last Updated 9 ಅಕ್ಟೋಬರ್ 2020, 7:13 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಶ್ವೇತಭವನಕ್ಕೆ ಮರಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವು ಸುರಕ್ಷತಾ ಕ್ರಮಗಳೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಬಹುದು ಎಂಬ ವೈದ್ಯರ ಸಲಹೆ ಮೇರೆಗೆ, ಅಧ್ಯಕ್ಷೀಯ ಚುನಾವಣಾ ಪ್ರಚಾರದ ರ‍್ಯಾಲಿಗಳನ್ನು ನಡೆಸಲು ಇಚ್ಛಿಸಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ನಾಲ್ಕು ದಿನ ವಿಶ್ರಾಂತಿ ಪಡೆದ ಟ್ರಂಪ್ ಅವರು ಸೋಮವಾರ ಶ್ವೇತಭವನಕ್ಕೆ ಮರಳಿದ್ದಾರೆ. ಕಳೆದ ಶುಕ್ರವಾರದಿಂದ ಟ್ರಂಪ್ ಅವರಿಗೆ ಜ್ವರ ಕಾಣಿಸಿಕೊಂಡಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಶ್ವೇತಭವನದ ವೈದ್ಯ ಡಾ. ಸಿಯಾನ್ ಕೊನ್ಲೆ ಅವರು ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಪತ್ರದಲ್ಲಿ, ’ತಜ್ಞ ವೈದ್ಯರ ತಂಡ ನೀಡಿದ ಸೂಚನೆಯಂತೆ ಅಧ್ಯಕ್ಷ ಟ್ರಂಪ್ ಅವರಿಗೆ ನೀಡುತ್ತಿದ್ದ ಕೊರೊನಾ ಚಿಕಿತ್ಸೆ ಇವತ್ತಿಗೆ ಪೂರ್ಣಗೊಂಡಿದೆ’ ಎಂದು ಉಲ್ಲೇಖಿಸಲಾಗಿದೆ.

ADVERTISEMENT

’ಮನೆಗೆ ಮರಳಿದಾಗಿನಿಂದ, ಟ್ರಂಪ್‌ ಅವರ ದೈಹಿಕ ಪರೀಕ್ಷೆ ಸ್ಥಿರವಾಗಿದೆ. ಯಾವುದೇ ಅನಾರೋಗ್ಯದ ಸೂಚನೆಗಳಿಲ್ಲ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

’ಕೊರೊನಾ ಸೋಂಕು ದೃಢಪಟ್ಟು ಶನಿವಾರಕ್ಕೆ ಹತ್ತು ದಿನಗಳು ಪೂರೈಸಲಿವೆ. ವೈದ್ಯರ ತಂಡ ನೀಡಿರುವ ಸೂಚನೆಗಳನ್ನು ಪಾಲಿಸುತ್ತಾ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಡಾ. ಕಾನ್ಲೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.