ADVERTISEMENT

ಭಾರತದ ಆಹ್ವಾನ ತಿರಸ್ಕರಿಸಿದ ಟ್ರಂಪ್‌ ?

ಗಣರಾಜ್ಯೋತ್ಸವ ಅತಿಥಿಯಾಗಿ ಪಾಲ್ಗೊಳ್ಳಲು ಮನವಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:25 IST
Last Updated 28 ಅಕ್ಟೋಬರ್ 2018, 20:25 IST
ನರೇಂದ್ರ ಮೋದಿ, ಡೊನಾಲ್ಡ್‌ ಟ್ರಂಪ್‌ 
ನರೇಂದ್ರ ಮೋದಿ, ಡೊನಾಲ್ಡ್‌ ಟ್ರಂಪ್‌    

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂಬ ಭಾರತದ ಆಹ್ವಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

‘ಭಾರತ ಕಳುಹಿಸಿದ್ದ ಆಮಂತ್ರಣವು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಲುಪಿದೆ, ಆದರೆ ಭೇಟಿ ನೀಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಅವರು ಕಳೆದ ಆಗಸ್ಟ್‌ನಲ್ಲಿ ತಿಳಿಸಿದ್ದರು.
ಮೂಲಗಳ ಪ್ರಕಾರ ಅಮೆರಿಕದ ಅಧಿಕಾರಿಗಳು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೊಭಾಲ್‌ಗೆ ಕಳುಹಿಸಿರುವ ಪತ್ರದಲ್ಲಿ ಆಹ್ವಾನ ನಿರಾಕರಣೆಯ ವಿಷಯ ತಿಳಿಸಿದ್ದಾರೆ. ಚಳಿಗಾಲದ ಅಧಿವೇಶನ ಹಾಗೂಸರ್ಕಾರಕ್ಕೆ ಸಂಬಂಧಿಸಿದ ಕೆಲಸದ ಒತ್ತಡದಲ್ಲಿರುವ ಕಾರಣ ಟ್ರಂಪ್ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭೇಟಿ ರದ್ದುಗೊಂಡಿರುವ ಕುರಿತಂತೆ, ವಿದೇಶಾಂಗ ಇಲಾಖೆ ಯಾವುದೇ ಹೇಳಿಕೆ ನೀಡಿಲ್ಲ. ಪ್ರವಾಸ ರದ್ದುಗೊಳಿಸುವ ಅಥವಾ ನಿಗದಿಗೊಳಿಸುವ ಬಗ್ಗೆ ಶ್ವೇತಭವನದ ಅಧಿಕಾರಿಗಳೇ ಹೇಳಿಕೆ ನೀಡಲಿದ್ದಾರೆ ಎಂದು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ADVERTISEMENT

2015ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಗಿನ ಅಧ್ಯಕ್ಷ ಬರಾಕ್‌ ಒಬಾಮ ಭಾಗವಹಿಸಿದ್ದರು.

ಅಮೆರಿಕದ ವಿರೋಧವನ್ನು ಕಡೆಗಣಿಸಿ ಭಾರತವು ರಷ್ಯಾದೊಂದಿಗೆ ಎಸ್-400 ಕ್ಷಿಪಣಿ ಒಪ್ಪಂದ ಮತ್ತು ಇರಾನ್‍ನಿಂದ ತೈಲ ಆಮದು ಮಾಡಲು ತೀರ್ಮಾನಿಸಿತ್ತು. ರಷ್ಯಾದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಯಾವುದೇ ದೇಶವು ಪರೋಕ್ಷ ದಿಗ್ಬಂಧನ ಎದುರಿಸಬೇಕಾಗಬಹುದು ಎಂದು ಅಮೆರಿಕ ಬೆದರಿಕೆಯೊಡ್ಡಿತ್ತು. ಈ ಎಲ್ಲ ಬೆಳವಣಿಗೆಯಿಂದ ಟ್ರಂಪ್‌ ಪ್ರವಾಸಕ್ಕೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.