ತಹವ್ವುರ್ ರಾಣಾ
– ಪಿಟಿಐ ಚಿತ್ರಗಳು
ಮುಂಬೈ: 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ (26/11) ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಪ್ರಮುಖ ಆರೋಪಿ ಪಾಕಿಸ್ತಾನದ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಗಲ್ಲಿಗೇರಿಸಬೇಕು ಎಂದು ದಾಳಿಯಲ್ಲಿ ಅನೇಕ ಜನರನ್ನು ರಕ್ಷಿಸಲು ನೆರವಾಗಿದ್ದ ಚಹಾ ಮಾರಾಟಗಾರ ಮೊಹಮ್ಮದ್ ತೌಫಿಕ್ ಒತ್ತಾಯಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ 'ಚೋಟು ಚಾಯ್‌ವಾಲಾ' ಖ್ಯಾತಿಯ ತೌಫಿಕ್, 'ಭಯೋತ್ಪಾದಕರ ವಿರುದ್ಧ ದೇಶದಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು' ಎಂದು ಬಯಸಿದ್ದಾರೆ.
ಆರೋಪಿ ತಹವ್ವುರ್‌ನನ್ನು ಇಂದು ಅಮೆರಿಕದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆ ತರುವ ಸಾಧ್ಯತೆಯಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ತೌಫಿಕ್, 'ಅಜ್ಮಲ್ ಕಸಬ್‌ಗೆ ನೀಡಿದಂತಹ ವಿಶೇಷ ಸೌಲಭ್ಯಗಳನ್ನು ತಹವ್ವುರ್ ರಾಣಾಗೆ ನೀಡಬಾರದು. ಬಿರಿಯಾನಿ ಅಥವಾ ಪ್ರತ್ಯೇಕ ಸೆಲ್‌ನಂತಹ ಯಾವುದೇ ವಿಶೇಷ ಉಪಚಾರವನ್ನು ನೀಡಬಾರದು. ಆತನನ್ನು ಕೂಡಲೇ ಗಲ್ಲಿಗೇರಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಭಾರತದಲ್ಲಿಯೂ ಭಯೋತ್ಪಾದಕರ ವಿರುದ್ಧ ಕಠಿಣ ಕಾನೂನು ಇರಬೇಕು. ರಾಣಾನನ್ನು ಭಾರತಕ್ಕೆ ತರುತ್ತಿರುವುದು ಒಳ್ಳೆಯ ವಿಚಾರ. ಆದರೆ ಆತನನ್ನು 15 ದಿನಗಳಲ್ಲಿ ಅಥವಾ ಎರಡು-ಮೂರು ತಿಂಗಳೊಳಗೆ ಗಲ್ಲಿಗೇರಿಸಬೇಕು' ಎಂದು ಆಗ್ರಹಿಸಿದ್ದಾರೆ.
'ಅಂತಹ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಯಾರಾದರೂ ಆತನನ್ನು ಉಳಿಸಲು ಪ್ರಯತ್ನ ಮಾಡುವ ಮೊದಲೇ ಗಲ್ಲಿಗೇರಿಸಬೇಕು' ಎಂದು ಹೇಳಿದ್ದಾರೆ.
2008ರ ನವೆಂಬರ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದಾಗ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ (ಸಿಎಸ್‌ಎಂಟಿ) ತೌಫಿಕ್ ಚಹಾ ಅಂಗಡಿ ನಡೆಸುತ್ತಿದ್ದರು. ದಾಳಿಯ ಭಯಾನಕ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ದಾಳಿ ಸಂದರ್ಭ ಅನೇಕ ಜನರನ್ನು ಎಚ್ಚರಿಸಿದ್ದರಲ್ಲದೆ ರಕ್ಷಿಸಲು ನೆರವಾಗಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಹಾಯ ಮಾಡಿದ್ದರು.
ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪದಗ್ರಹಣ ಮಾಡಿದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ 65 ವರ್ಷದ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದರು.
2008ರ ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.