ADVERTISEMENT

‘ಇಂಡಿಯಾ’ ಮುಖಂಡರ ಮಾತುಗಳಿಗೆ ಪ್ರತಿಕ್ರಿಯೆ ಬೇಡ: ರಾಹುಲ್ ಸೂಚನೆ

ಪಿಟಿಐ
Published 10 ಡಿಸೆಂಬರ್ 2024, 16:04 IST
Last Updated 10 ಡಿಸೆಂಬರ್ 2024, 16:04 IST
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಅದಾನಿ ವಿಚಾರವಾಗಿ ಸಂಸತ್ತಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. –ಪಿಟಿಐ ಚಿತ್ರ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಅದಾನಿ ವಿಚಾರವಾಗಿ ಸಂಸತ್ತಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. –ಪಿಟಿಐ ಚಿತ್ರ   

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಮಧ್ಯಮ ಹಾಗೂ ಕೆಳ ಹಂತಗಳ ಮುಖಂಡರು ಆಡುವ ಮಾತುಗಳಿಗೆ ಪ್ರತಿಕ್ರಿಯೆ ನೀಡದೆ ಇರುವಂತೆ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯರಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಟಿಎಂಸಿ ಮುಖಂಡರು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ರಾಹುಲ್ ಅವರು ಈ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ಸಿನ ಲೋಕಸಭಾ ಸದಸ್ಯರ ಜೊತೆ ಸಭೆ ನಡೆಸಿದ ರಾಹುಲ್ ಅವರು, ಕಲಾಪಕ್ಕೂ ಮೊದಲು ಪಕ್ಷ ನಡೆಸುವ ಪ್ರತಿಭಟನೆಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸೂಚಿಸಿದರು. ಅದರಲ್ಲೂ ಮುಖ್ಯವಾಗಿ, ಕಾಂಗ್ರೆಸ್ ಅಧ್ಯಕ್ಷರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗ, ಸಂಸದರೆಲ್ಲ ಹಾಜರಿರಬೇಕು ಎಂದು ತಿಳಿಸಿದರು.

ADVERTISEMENT

ಅದಾನಿ ವಿಚಾರವಾಗಿ ಕಾಂಗ್ರೆಸ್ ನಡೆಸಿರುವ ಪ್ರತಿಭಟನೆಯು ಸರ್ಕಾರದಲ್ಲಿ ಭೀತಿ ಸೃಷ್ಟಿಸಿದೆ. ಜನಪರವಾದ ಸಂಗತಿಗಳನ್ನು ಪ್ರಸ್ತಾಪಿಸುವುದನ್ನು ಕಾಂಗ್ರೆಸ್ಸಿಗರು ಮುಂದುವರಿಸಬೇಕು ಎಂದು ರಾಹುಲ್ ಸೂಚನೆ ನೀಡಿರುವುದಾಗಿ ಮೂಲಗಳು ಹೇಳಿವೆ.

ಪ್ರತಿಭಟನೆಗೆ ವಿನೂತನವಾದ ಕ್ರಮಗಳನ್ನು ರೂಪಿಸುವಂತೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದರಲ್ಲಿ ಮನವಿ ಮಾಡಿದ್ದಾರೆ.

ಸಭೆಯ ನಂತರ ವಿರೋಧ ಪಕ್ಷದ ಸಂಸದರು ಅದಾನಿ ವಿಚಾರವಾಗಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ವ್ಯಂಗ್ಯಭಾವಚಿತ್ರ ಇರುವ ಕಪ್ಪು ಬಣ್ಣದ ಚೀಲ ಹಿಡಿದು ‍ಪ್ರತಿಭಟಿಸಿದರು. ಈ ಚೀಲಗಳ ಮೇಲೆ ‘ಮೋದಿ ಅದಾನಿ ಭಾಯಿ ಭಾಯಿ’ ಎಂದು ಬರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.