FIR
ನೊಯಿಡಾ: ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಹಾಗೂ ಇತರ ಆರು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಸೇರಿದಂತೆ ಇತರ ಆರೋಪಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.
2019ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶಿವಾಂಶು ರಜಪೂತ್ ಅವರ ಪತ್ನಿ ಕೃತಿ ಸಿಂಗ್ ದೂರು ನೀಡಿದ್ದಾರೆ. ವೈದ್ಯೆಯಾಗಿರುವ ಇವರು, ಉತ್ತರ ಪ್ರದೇಶದ ನೊಯಿಡಾದವರು. ಶಿವಾಂಶು ಅವರು ಬೇರೊಬ್ಬ ಮಹಿಳೆಯೊಂದಿಗ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರಿನಲ್ಲಿ ಕೃತಿ ತಿಳಿಸಿದ್ದಾರೆ.
ಶಿವಾಂಶು, ಅವರ ತಂದೆ, ತಾಯಿ, ಸಹೋದರ, ಅತ್ತಿಗೆ ಹಾಗೂ ಶಿವಾಂಶು ಅವರ ಇಬ್ಬರು ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ.
41 ಪುಟಗಳ ದೂರು ನೀಡಿರುವ ಕೃತಿ ಅವರು, ‘2021ರಲ್ಲಿ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ನನ್ನನ್ನು ಪೀಡಿಸಲಾಗುತ್ತಿದೆ. ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಆಭರಣ ಹಾಗೂ ಇತರ ಖರ್ಚುಗಳು ಸೇರಿದಂತೆ ಮದುವೆಗೆ ನನ್ನ ಕುಟುಂಬ ₹2 ಕೋಟಿ ವ್ಯಯ ಮಾಡಿದೆ. ಆದರೂ ನನ್ನ ಅತ್ತೆ–ಮಾವ ನನಗೆ ಇನ್ನಷ್ಟು ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು’ ಎಂದೂ ಹೇಳಿದ್ದಾರೆ.
ಕೃತಿ ಹಾಗೂ ಶಿವಾಂಶು ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.