ADVERTISEMENT

ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ಪದಚ್ಯುತ

ಏಜೆನ್ಸೀಸ್
Published 16 ಫೆಬ್ರುವರಿ 2021, 16:56 IST
Last Updated 16 ಫೆಬ್ರುವರಿ 2021, 16:56 IST
ಕಿರಣ್ ಬೇಡಿ
ಕಿರಣ್ ಬೇಡಿ   

ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಡಾ. ಕಿರಣ್ ಬೇಡಿ ಅವರನ್ನು ಪದಚ್ಯುತಿಗೊಳಿಸಲಾಗಿದೆ. ತೆಲಂಗಾಣದ ರಾಜ್ಯಪಾಲೆ ಡಾ. ತಮಿಳುಸಾಯಿ ಸುಂದರರಾಜನ್ ಅವರಿಗೆ ಸದ್ಯ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಮುಂದಿನ ವ್ಯವಸ್ಥೆ ಮಾಡುವವರೆಗೆ ಹೆಚ್ಚುವರಿಯಾಗಿ ಹೊಣೆ ವಹಿಸಿಕೊಳ್ಳುವಂತೆ ತಮಿಳುಸಾಯಿ ಸುಂದರರಾಜನ್ ಅವರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಪುದುಚೇರಿಯ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಅಲ್ಪಮತಕ್ಕೆ ಕುಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟವಾಗಿದೆ. ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಆಪ್ತರಲ್ಲೊಬ್ಬರಾದ ಎ. ಜಾನ್‌ಕುಮಾರ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ. ಜಾನ್‌ಕುಮಾರ್ ಸೇರಿ ಒಟ್ಟು ನಾಲ್ವರು ಶಾಸಕರು ಪಕ್ಷ ತೊರೆದಿದ್ದಾರೆ.

ದೇಶದ ಮೊದಲ ಐಪಿಎಸ್‌ ಅಧಿಕಾರಿಯಾಗಿರುವ ಕಿರಣ್ ಬೇಡಿ ಅವರು 2015ರ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. 2016ರ ಮೇ 28ರಂದು ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.

ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಗಳಿಗೆ ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಜನವರಿಯಲ್ಲಿ ಆರೋಪಿಸಿದ್ದರು. ಬೇಡಿ ವಿರುದ್ಧ ಅಹೋರಾತ್ರಿ ಪ್ರತಿಭಟನೆಯನ್ನೂ ನಡೆಸಿದ್ದರು. ಪುದುಚೇರಿ ಕಲ್ಯಾಣ ಸಚಿವ ಎಂ.ಕಂದಸಾಮಿ ಕೂಡ ಬೇಡಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಿರಣ್ ಬೇಡಿ ಅವರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ನಾರಾಯಣಸ್ವಾಮಿ ಅವರು ಜನವರಿಯಲ್ಲಿ ಸಹಿ ಅಭಿಯಾನವನ್ನೂ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.