ADVERTISEMENT

ಉಸಿರುಗಟ್ಟಿ ಡಾ.ಶೀತಲ್‌ ಆಮ್ಟೆ ಸಾವು

ವರೋರಾದ ಮನೆಯಲ್ಲಿ ನ.30ರಂದು ಆತ್ಮಹತ್ಯೆ

ಪಿಟಿಐ
Published 30 ಡಿಸೆಂಬರ್ 2020, 20:59 IST
Last Updated 30 ಡಿಸೆಂಬರ್ 2020, 20:59 IST
ಶೀತಲ್ ಆಮ್ಟೆ (ಚಿತ್ರಕೃಪೆ: ಟ್ವಿಟ್ಟರ್)
ಶೀತಲ್ ಆಮ್ಟೆ (ಚಿತ್ರಕೃಪೆ: ಟ್ವಿಟ್ಟರ್)   

ಚಂದ್ರಾಪುರ, ಮಹಾರಾಷ್ಟ್ರ:ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಸಾಮಾಜಿಕ ಕಾರ್ಯಕರ್ತೆ ಡಾ.ಶೀತಲ್‌ ಆಮ್ಟೆ–ಕರ್ಜಗಿ ಅವರ ಸಾವಿಗೆ ಉಸಿರುಗಟ್ಟಿರುವುದು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅವರ ಸಾವು ಸಂಭವಿಸಿದ ಕೊಠಡಿಯೊಳಗೆ ವ್ಯಕ್ತಿಯೊಬ್ಬರು ಬಲವಂತದಿಂದ ಪ್ರವೇಶಿಸಿ ಅವರ ಕತ್ತು ಹಿಸುಕಿದ ಬಗ್ಗೆ ತನಿಖೆ ವೇಳೆ ಯಾವುದೇ ಸಾಕ್ಷ್ಯ ದೊರೆತಿಲ್ಲ’ ಎಂದು ಎಸ್‌ಪಿ ಅರವಿಂದ ಸಾಳ್ವೆ ಬುಧವಾರ ಹೇಳಿದರು.

ಖ್ಯಾತ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ ಮೊಮ್ಮಗಳಾದ ಡಾ.ಶೀತಲ್ ಆಮ್ಟೆ ಕಾರಜಿಗಿ (39) ಅವರು ಕೌಟುಂಬಿಕ ಕಲಹದ ಕಾರಣಕ್ಕಾಗಿ ಮಹಾರಾಷ್ಟ್ರದ ವರೋರಾದಲ್ಲಿ ನ. 30ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ADVERTISEMENT

ಚುಚ್ಚುಮದ್ದು ತೆಗೆದುಕೊಂಡಿರುವ ಗುರುತುಗಳು ಅವರ ಬಲಗೈಯಲ್ಲಿ ಕಂಡು ಬಂದಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಎರಡು ದಿನ ಮೊದಲು ಅವರು ಔಷಧಿ ಅಂಗಡಿವೊಂದರಲ್ಲಿ, ನಾಯಿಗಳಿಗೆ ನೀಡುವ ಔಷಧಿಗಳ ಬಗ್ಗೆ ವಿಚಾರಿಸಿದ್ದರು. ನನ್ನ ನಾಯಿ ಯಕೃತ್ತಿಗೆ ಸಂಬಂಧಿಸಿದ ದೊಡ್ಡ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆ ಔಷಧಿ ಅಗತ್ಯವಿದೆ ಎಂದು ಹೇಳಿದ್ದರು’ ಎಂದು ಸಾಳ್ವೆ ತಿಳಿಸಿದರು.

ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಶೀತಲ್‌, ತಾವು ಸಹ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದೂ ತಿಳಿಸಿದರು.

ಬಾಬಾ ಆಮ್ಟೆ ಅವರು ವರೋರಾದಲ್ಲಿ ಸ್ಥಾಪಿಸಿರುವ ಮಹಾರೋಗಿ ಸೇವಾ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಶೀತಲ್, ಸಮಿತಿಯ ನಿರ್ವಹಣೆ ಕುರಿತು ಟ್ರಸ್ಟ್‌ನ ಸದಸ್ಯರು ಮತ್ತು ಆಮ್ಟೆ ಕುಟುಂಬದವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.