ADVERTISEMENT

ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಡ್‌ ಟ್ಯಾಕ್ಸಿ ಬಳಕೆಗೆ ಚಿಂತನೆ

ಪಿಟಿಐ
Published 7 ಮಾರ್ಚ್ 2021, 8:03 IST
Last Updated 7 ಮಾರ್ಚ್ 2021, 8:03 IST
ಪಾಡ್‌ ಟ್ಯಾಕ್ಸಿ
ಪಾಡ್‌ ಟ್ಯಾಕ್ಸಿ   

ನೋಯ್ಡಾ(ಉತ್ತರಪ್ರದೇಶ): ‘ನೂತನವಾಗಿ ನಿರ್ಮಾಣವಾಗುತ್ತಿರುವ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದುಹೋಗುವ ಪ್ರಯಾಣಿಕರಿಗೆ ಚಾಲಕರಹಿತ ವೈಯಕ್ತಿಕ ಕ್ಷಿಪ್ರ ಸಾರಿಗೆ (ಪಿಆರ್‌ಟಿ) ಅಥವಾ ಪಾಡ್‌ ಟ್ಯಾಕ್ಸಿ ಸೇವೆ ನೀಡುವ ಬಗ್ಗೆ ಪರಿಶೀಲನೆ ಮಾಡಬಹುದು’ ಎಂದು ಬಿಜೆಪಿ ಶಾಸಕ ಧಿರೇಂದ್ರ ಸಿಂಗ್ ಅವರು ಹೇಳಿದರು.

ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಹೈಟೆಕ್‌ ಪಾಡ್‌ ಟ್ಯಾಕ್ಸಿಗಳು, ಮಿತವ್ಯಯಕಾರಿ, ಪರಿಸರ ಸ್ನೇಹಿಯಾಗಿವೆ’ ಎಂದು ಜೇವರ್‌ ಕ್ಷೇತ್ರದ ಶಾಸಕರೂ ಆಗಿರುವ ಸಿಂಗ್‌ ಹೇಳಿದ್ದಾರೆ. ಪಾಡ್ ಟ್ಯಾಕ್ಸಿ ಸೇವೆ ಒದಗಿಸುವಲ್ಲಿ ಪರಿಣತಿ ಹೊಂದಿರುವ ಅಲ್ಟ್ರಾ ಪಿಆರ್‌ಟಿ ಕಂಪನಿಯ ಪ್ರತಿನಿಧಿಗಳ ಜೊತೆ ಮಾತುಕತೆಯ ನಂತರ ಸಿಂಗ್‌ ಈ ಸಲಹೆ ನೀಡಿದ್ದಾರೆ.

ಹಸಿರು ವಲಯದಲ್ಲಿರುವ ಈ ವಿಮಾನ ನಿಲ್ದಾಣವು ಶಾಸಕ ಸಿಂಗ್‌ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ADVERTISEMENT

ಜೇವರ್‌ ಮತ್ತು ಗ್ರೇಟರ್‌ ನೊಯ್ಡಾ ಮಧ್ಯೆ ಇಂಥ ಟ್ಯಾಕ್ಸಿ ಸೇವೆ ಒದಗಿಸುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.

ಸ್ವಿಜರ್ಲೆಂಡ್‌ನ ಜ್ಯೂರಿಚ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್ ಏಜಿ ಸಂಸ್ಥೆ, ಅಂದಾಜು ₹29,560 ಕೋಟಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ವಯಂ ಚಾಲನಾ ವ್ಯವಸ್ಥೆ ಹೊಂದಿರುವ ಪಾಡ್‌ ಟ್ಯಾಕ್ಸಿಗಳಲ್ಲಿ ಅಪಘಾತಪ್ರಮಾಣ ಶೂನ್ಯ. ಇದು ಇಂಗಾಲ ಉಗುಳುವುದಿಲ್ಲ. ಈ ಟ್ಯಾಕ್ಸಿಗಳಲ್ಲಿ ಐದರಿಂದ ಆರು ಮಂದಿ ಪ್ರಯಾಣಿಸಬಹುದು. ಖಾಲಿ ಓಡುವ ಬಸ್‌ಗಳಿಗಿಂತ ಇದು ಉಪಯುಕ್ತ’ ಎಂದರು.

ಮೆಟ್ರೊ ಅಥವಾ ರೈಲು ಸೇವೆ ಒದಗಿಸಲು ತಗಲುವ ವೆಚ್ಚಕ್ಕಿಂತ ಐದು ಪಟ್ಟು ಕಡಿಮೆ ವೆಚ್ಚದಲ್ಲಿ ಈ ಟ್ಯಾಕ್ಸಿ ಸೇವೆ ಒದಗಿಸಬಹುದು ಎಂದು ಆಲ್ಟ್ರಾ ಪಿಆರ್‌ಟಿ (ಭಾರತ ಮತ್ತು ಮಧ್ಯಪೂರ್ವ ರಾಷ್ಟ್ರಗಳ ವ್ಯಾಪ್ತಿ) ಸಿಇಒ ನಿತಿನ್‌ ಕುಮಾರ್‌ ತಿಳಿಸಿದರು.

‘ಪಾಡ್‌ ಟ್ಯಾಕ್ಸಿಗಳಿಗೆ ಒಂದು ಕಿ.ಮೀ ಪಥದ ನಿರ್ಮಾಣ ವೆಚ್ಚ ₹40 ರಿಂದ 45 ಕೋಟಿ. ಅದೇ ಮೆಟ್ರೊ ಮಾರ್ಗಕ್ಕೆ ₹135-150 ಕೋಟಿ ತಗಲುತ್ತದೆ. ಸಮೂಹ ತ್ವರಿತ ಸಾರಿಗೆ ಮಾರ್ಗಕ್ಕೆ ₹250-350 ಕೋಟಿ ವೆಚ್ಚವಾಗುತ್ತದೆ’ ಎಂದು ಅಲ್ಟ್ರಾ ಪಿಆರ್‌ಟಿ ಅಂದಾಜು ಪಟ್ಟಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.