ADVERTISEMENT

ಉಗಾಂಡ, ಮೊಜಾಂಬಿಕ್‌ಗೆ ಭೇಟಿ ನೀಡಲಿರುವ ವಿದೇಶಾಂಗ ಸಚಿವ ಜೈಶಂಕರ್‌

ಪಿಟಿಐ
Published 9 ಏಪ್ರಿಲ್ 2023, 13:01 IST
Last Updated 9 ಏಪ್ರಿಲ್ 2023, 13:01 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಉಗಾಂಡಾ ಮತ್ತು ಮೊಜಾಂಬಿಕ್‌ಗೆ ಆರು ದಿನಗಳ ಕಾಲ ಭೇಟಿ ನೀಡಲಿದ್ದಾರೆ.

ಈ ಕುರಿತು ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿದ್ದು, ‘ಸೋಮವಾರವೇ ಜೈಶಂಕರ್‌ ಅವರು ತಮ್ಮ ಪ್ರಯಾಣ ಆರಂಭಿಸಲಿದ್ದಾರೆ. ಉಭಯ ದೇಶಗಳೊಂದಿಗೆ ಭಾರತದ ಬಾಂಧವ್ಯವನ್ನು ವಿಸ್ತರಿಸುವ ಮಾರ್ಗಗಳನ್ನು ಅವರು ಅನ್ವೇಷಿಸಲಿದ್ದಾರೆ’ ಎಂದು ತಿಳಿಸಿದೆ.

‘ಜೈಶಂಕರ್‌ ಅವರು ಇದೇ 10ರಿಂದ 12ರವರೆಗೆ ಉಗಾಂಡಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ವಿದೇಶಾಂಗ ಸಚಿವ ಜನರಲ್ ಜೆಜೆ ಒಡೊಂಗೊ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ ಹಾಗೂ ಇತರ ಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಜಿಂಜಾದಲ್ಲಿನ ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಭಾರತದ ಹೊರಗೆ ಎನ್‌ಎಫ್‌ಎಸ್‌ಯು ಸ್ಥಾಪಿಸುವ ಕುರಿತು ಭಾರತ– ಉಗಾಂಡ ನಡುವಿನ ತಿಳುವಳಿಕೆ ಪತ್ರಕ್ಕೂ ಸಹಿ ಹಾಕುವ ಸಾಧ್ಯತೆಯಿದೆ’ ಎಂದು ಹೇಳಿದೆ.

ADVERTISEMENT

ಬಳಿಕ ಸೌರಚಾಲಿತ ನೀರು ಸರಬರಾಜು ಯೋಜನೆ ಭೂಮಿಪೂಜೆ ನೆರವೇರಿಸಲಿದ್ದಾರೆ. ನಂತರ ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಚರ್ಚಿಸಲಿದ್ದಾರೆ. ಇದೇ 13ರಿಂದ 15ರವರೆಗೆ ಮೊಜಾಂಬಿಕ್‌ ಜೈಶಂಕರ್‌ ಅವರು ಭೇಟಿ ನೀಡಲಿದ್ದು, ಹಲವು ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮೊಜಾಂಬಿಕ್‌ನ ವಿದೇಶಾಂಗ ಸಚಿವ ವೆರೋನಿಕಾ ಮಕಾಮೊ ಅವರೊಂದಿಗೆ ಜಂಟಿ ಆಯೋಗದ ಸಭೆಯ ಐದನೇ ಅಧಿವೇಶನದ ಸಹ-ಅಧ್ಯಕ್ಷತೆಯನ್ನೂ ಅವರು ವಹಿಸಿಕೊಳ್ಳಲಿದ್ದಾರೆ’ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.