ADVERTISEMENT

ಬಿಹಾರ: ಆಮಿಷ ತಡೆಗೆ ಆಯೋಗ ಸೂಚನೆ

ಪಿಟಿಐ
Published 17 ಅಕ್ಟೋಬರ್ 2025, 15:47 IST
Last Updated 17 ಅಕ್ಟೋಬರ್ 2025, 15:47 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಬಿಹಾರ ಚುನಾವಣೆ ವೇಳೆ ಮತದಾರರನ್ನು ಓಲೈಸಲು ಮಾದಕವಸ್ತು, ಮದ್ಯ ಮತ್ತು ನಗದು ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಕಾನೂನು ಜಾರಿ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಿದೆ. 

ಮತದಾರರಿಗೆ ಆಮಿಷ ಒಡ್ಡುವ ಕಾರ್ಯಗಳನ್ನು ತಡೆಗಟ್ಟುವ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡುವ ಉದ್ದೇಶದಿಂದ ಆಯೋಗವು ಶುಕ್ರವಾರ ವಿವಿಧ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿತು. ಅಕ್ರಮಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಮಾಹಿತಿ ನೀಡಿದರು. 

ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ವೆಚ್ಚಗಳು ಹಾಗೂ ಗೋಪ್ಯವಾಗಿ ನಡೆಸುವ ವೆಚ್ಚಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು. ಅಲ್ಲದೆ ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆಯಲು ತಿಳಿಸಲಾಯಿತು.

ADVERTISEMENT

ಆರ್ಥಿಕ ಅಪರಾಧಗಳ ಕುರಿತ ಗುಪ್ತಚರ ಮಾಹಿತಿಯು ಕಾನೂನು ಜಾರಿ ಸಂಸ್ಥೆಗಳ ನಡುವೆ ಹಂಚಿಕೆಯಾಗಬೇಕು. ಅಲ್ಲದೆ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರ ಪ್ರಮುಖವಾಗಿರಬೇಕು ಎಂದು ತಿಳಿಸಲಾಯಿತು.

ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ (ನೇಪಾಳ) ಗಡಿಗಳ ಮೇಲೆ ಹದ್ದಿನ ಕಣ್ಣಿಡಬೇಕು. ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಅಕ್ರಮ ವಸ್ತುಗಳ ಸಾಗಣೆ, ಮಾದಕ ವಸ್ತುಗಳು, ಮದ್ಯ, ನಗದು, ನಕಲಿ ನೋಟುಗಳು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಇವುಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.

ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಶೂನ್ಯ ಸಹಿಷ್ಣು ನೀತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಯಿತು. ಬಿಹಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. 

ಸಿಬಿಡಿಟಿ, ಸಿಬಿಐಸಿ, ಇ.ಡಿ, ಸಿಇಐಬಿ, ಎಫ್‌ಐಯು–ಐಎನ್‌ಡಿ, ಆರ್‌ಬಿಐ, ಐಬಿಎ, ಎನ್‌ಸಿಬಿ, ಸಿಐಎಸ್‌ಎಫ್‌, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಎಸ್‌ಎಸ್‌ಬಿ, ಬಿಸಿಎಎಸ್‌, ಎಎಐ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಬಿಹಾರ ವಿಧಾನಸಭೆಗೆ ನವೆಂಬರ್‌ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.