ಚುನಾವಣಾ ಆಯೋಗ
ನವದೆಹಲಿ: ಯಮುನಾ ನದಿಗೆ ಹರಿಯಾಣ ಸರ್ಕಾರವು ವಿಷಕಾರಿ ರಸಾಯನಿಕಗಳನ್ನು ಬೆರೆಸಲು ಯತ್ನಿಸಿದೆ ಎಂದು ತಾವು ಮಾಡಿರುವ ಆರೋಪಕ್ಕೆ ಪೂರಕ ಸಾಕ್ಷ್ಯಗಳನ್ನು ಬುಧವಾರ ರಾತ್ರಿ 8ರ ಒಳಗಾಗಿ ಒದಗಿಸಬೇಕು ಎಂದು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗವು (ಇ.ಸಿ.) ತಾಕೀತು ಮಾಡಿದೆ.
ಒಂದು ವೇಳೆ ಸಾಕ್ಷ್ಯವನ್ನು ಒದಗಿಸುವಲ್ಲಿ ವಿಫಲರಾದರೆ, ರಾಷ್ಟ್ರೀಯ ಭಾವೈಕ್ಯ ಕದಡಲು ಹಾಗೂ ಸೌಹಾರ್ದಕ್ಕೆ ಭಂಗ ಪಡಿಸಲು ಯತ್ನಿಸಿದ ಆರೋಪದ ಮೇಲೆ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದೂ ಇ.ಸಿ. ಹೇಳಿದೆ.
ನದಿಗೆ ಬೆರೆಸಿದ್ದಾರೆ ಎಂದು ಹೇಳಿರುವ ರಸಾಯನಿಕ ಪದಾರ್ಥದ ಸ್ವರೂಪವೇನು, ಎಷ್ಟು ವ್ಯಾಪ್ತಿಯವರೆಗೆ ಅದು ಹರಡಬಹುದು ಎನ್ನುವ ಮಾಹಿತಿಯನ್ನು ಸಮರ್ಪಕ ದಾಖಲೆಗಳ ಸಹಿತ ಒದಗಿಸಬೇಕು. ದೆಹಲಿ ಜಲಮಂಡಳಿಯ ಎಂಜಿನಿಯರ್‌ಗಳು ಸಮಯಕ್ಕೆ ಸರಿಯಾಗಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು ಎಂಬ ತಮ್ಮ ಹೇಳಿಕೆಗೆ ಪೂರಕವಾದ ಮಾಹಿತಿಯನ್ನೂ ಒದಗಿಸಬೇಕು ಎಂದು ಕೇಜ್ರಿವಾಲ್ ಅವರನ್ನು ಚುನಾವಣಾ ಆಯೋಗವು ಕೇಳಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಎರಡೂ ಕೇಜ್ರಿವಾಲ್ ನೀಡಿದ ಹೇಳಿಕೆಯ ಕುರಿತು ಆಯೋಗಕ್ಕೆ ದೂರು ಸಲ್ಲಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.