ADVERTISEMENT

ಶಿವಸೇನಾ ಪಕ್ಷದ ಹೆಸರು, ಚಿಹ್ನೆ ಬಳಸದಂತೆ ಠಾಕ್ರೆ, ಶಿಂದೆ ಬಣಕ್ಕೆ ನಿರ್ಬಂಧ

ಪಿಟಿಐ
Published 8 ಅಕ್ಟೋಬರ್ 2022, 19:34 IST
Last Updated 8 ಅಕ್ಟೋಬರ್ 2022, 19:34 IST
.
.   

ನವದೆಹಲಿ: ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆ ಎರಡನ್ನೂ ಬಳಸದಂತೆ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣಗಳಿಗೆ ಚುನಾವಣಾ ಆಯೋಗವು ಶನಿವಾರ ನಿರ್ಬಂಧ ವಿಧಿಸಿದೆ.

ಪ್ರತಿಸ್ಪರ್ಧಿ ಬಣಗಳು ಪ್ರತಿಪಾದಿಸಿದ ಹಕ್ಕುಗಳ ಕುರಿತು ಮನವಿಗೆ ಮಧ್ಯಂತರ ಆದೇಶ ನೀಡಿರುವ ಚುನಾವಣಾ ಆಯೋಗವು, ಸೋಮವಾರದೊಳಗೆ ಮೂರು ವಿಭಿನ್ನ ಪಕ್ಷದ ಹೆಸರುಗಳು ಮತ್ತು ಸೂಕ್ತ ಚಿಹ್ನೆಗಳನ್ನು ಸೂಚಿಸುವಂತೆ ಹೇಳಿದೆ.

‘ಎರಡೂ ಪ್ರತಿಸ್ಪರ್ಧಿ ಗುಂಪುಗಳನ್ನು ಸಮತೋಲನದಲ್ಲಿರಿಸಲು ಮತ್ತು ಅವರ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು, ಆದ್ಯತೆಯ ಮೇರೆಗೆ, ಎರಡೂ ಗುಂಪುಗಳಿಗೆ ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಲು ಅನುಮತಿ ನೀಡುವುದಿಲ್ಲ’ ಎಂದು ಆಯೋಗ ಹೇಳಿದೆ.

ADVERTISEMENT

ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಿಂದೆ ಬಣವು ಪಕ್ಷದ ಬಿಲ್ಲು‍–ಬಾಣದ ಚಿಹ್ನೆಯನ್ನು ತನಗೆ ಹಂಚಿಕೆ ಮಾಡುವಂತೆ ಕೋರಿ ಶುಕ್ರವಾರ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಶನಿವಾರ ಉದ್ಧವ್ ಠಾಕ್ರೆ ಬಣವೂ ಚಿಹ್ನೆ ಹಂಚಿಕೆಗೆ ಕೋರಿ ಮನವಿ ಸಲ್ಲಿಸಿತ್ತು.

‘ಉಪಚುನಾವಣೆಯ ಎಲ್ಲಾ ಚುನಾವಣಾ ಹಂತಗಳು ಯಾವುದೇ ಗೊಂದಲ ಮತ್ತು ವಿರೋಧಾಭಾಸಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ಬದ್ಧವಾಗಿದೆ’ ಎಂದು ಮಧ್ಯಂತರ ಆದೇಶದಲ್ಲಿ ಆಯೋಗ ತಿಳಿಸಿದೆ.

ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ 14 ಕೊನೆಯ ದಿನಾಂಕವಾಗಿದೆ. ಶಾಸಕ ರಮೇಶ್‌ ಲಟ್ಕೆ ಅವರ ನಿಧನಿಂದಾಗಿ ಉಪಚುನಾವಣೆ ಅನಿವಾರ್ಯವಾಗಿದ್ದು, ಲಟ್ಕೆ ಅವರ ಪತ್ನಿ ರುತುತಾ ಲಟ್ಕೆ ಅವರನ್ನು ಕಣಕ್ಕಿಳಿಸಲು ಉದ್ಧವ್ ಬಣ ನಿರ್ಧರಿಸಿದೆ. ಬೃಹನ್‌ಮುಂಬೈ ಮಹಾನಗರ ಪಾಲಿಕೆ ಸದಸ್ಯ ಮುರ್ಜಿ ಪಟೇಲ್‌ ಅವರನ್ನು ಕಣಕ್ಕಿಳಿಸಲು ಶಿಂದೆ ಬಣ ನಿರ್ಧರಿಸಿದೆ. ಕಾಂಗ್ರೆಸ್‌, ಎನ್‌ಸಿಪಿ ಪಕ್ಷಗಳು ಠಾಕ್ರೆ ಬಣದ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರ್ಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.