ADVERTISEMENT

ಇವಿಎಂ ಬಳಕೆಗೆ ಅವಕಾಶ: ತ್ವರಿತ ವಿಚಾರಣೆ ಕೋರಿ ‘ಸುಪ್ರೀಂ’ಗೆ ಚುನಾವಣಾ ಆಯೋಗ ಅರ್ಜಿ

ಚುನಾವಣಾ ತಕರಾರು ಅರ್ಜಿ ಸಲ್ಲಿಕೆಗೆ ಕಾಲಮಿತಿ ನಿಗದಿಗೆ ಮನವಿ

ಪಿಟಿಐ
Published 1 ಸೆಪ್ಟೆಂಬರ್ 2021, 10:11 IST
Last Updated 1 ಸೆಪ್ಟೆಂಬರ್ 2021, 10:11 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಆರು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಗೆ ಬಳಸಲಾದ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ತಕರಾರು ಅರ್ಜಿಗಳ ಕಾರಣಗಳಿಂದಾಗಿ ಪುನಃ ಬಳಕೆ ಮಾಡಲು ಆಗುತ್ತಿಲ್ಲ. ಇವುಗಳ ಬಳಕೆಗೆ ಅನುಕೂಲವಾಗುವ ಸಂಬಂಧ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೋರಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದೆ.

ಚುನಾವಣಾ ಆಯೋಗದ ಅರ್ಜಿಯನ್ನು ಪುರಸ್ಕರಿಸಿರುವ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್‌.ಬೋಪಣ್ಣ ಅವರಿರುವ ನ್ಯಾಯಪೀಠ, ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿತು.

‘ಚುನಾವಣಾ ತಕರಾರು ಅರ್ಜಿಗಳ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಇವಿಎಂಗಳು ಹಾಗು ವಿವಿಪ್ಯಾಟ್‌ಗಳನ್ನು ಸಂರಕ್ಷಿಸಿ ಇಡಲಾಗಿದೆ. ತಕರಾರು ಅರ್ಜಿಗಳ ವಿಲೇವಾರಿಯಾಗದೇ ಇವುಗಳನ್ನು ಬಳಕೆ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಆಯೋಗದ ಪರ ಹಿರಿಯ ವಕೀಲ ವಿಕಾಸ್‌ ಸಿಂಗ್ ನ್ಯಾಯಾಲಯ ಮನವಿ ಮಾಡಿದರು.

ADVERTISEMENT

‘ಅಸ್ಸಾಂ, ಕೇರಳ, ದೆಹಲಿ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಗೆ ಸಂಬಂಧಿಸಿ ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಮಿತಿ ನಿಗದಿ ಮಾಡಬೇಕು ಎಂದೂ ಅವರು ಮನವಿ ಮಾಡಿದರು.

‘ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್‌ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಈ ಇವಿಎಂಗಳು, ವಿವಿಪ್ಯಾಟ್‌ಗಳ ಅಗತ್ಯವಿದೆ’ ಎಂದು ಅವರು ಕೋರ್ಟ್‌ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.