ADVERTISEMENT

ಕೂಚ್ ಬಿಹಾರ್ ಕುರಿತ ಹೇಳಿಕೆ: ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 9:29 IST
Last Updated 13 ಏಪ್ರಿಲ್ 2021, 9:29 IST
ದಿಲೀಪ್ ಘೋಷ್ (ಪಿಟಿಐ ಚಿತ್ರ)
ದಿಲೀಪ್ ಘೋಷ್ (ಪಿಟಿಐ ಚಿತ್ರ)   

ಕೋಲ್ಕತ್ತ: ಕೂಚ್ ಬಿಹಾರ್‌ನ ಸೀತಾಲಕುಚಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್‌ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಸೀತಾಲಕುಚಿಯಲ್ಲಿನ ತುಂಟ ಹುಡುಗರು ಗುಂಡೇಟು ತಿಂದಿದ್ದಾರೆ. ಮುಂದಿನ ಹಂತದ ಮತದಾನದಲ್ಲಿ ತುಂಟತನ ತೋರಿದರೆ ಮತ್ತಷ್ಟು ಗುಂಡೇಟು ತಿನ್ನಬೇಕಾಗುತ್ತದೆ ಎಂದು ಘೋಷ್ ಹೇಳಿದ್ದರು.

ಬಾರಾನಗರ್‌ನಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ. ಕೇಂದ್ರದ ಪಡೆಗಳು ಅಲ್ಲಿರಲಿವೆ. ನಿಮ್ಮನ್ನು ಬೆದರಿಸುವ ಧೈರ್ಯವನ್ನು ಯಾರೂ ತೋರಲಾರರು. ಯಾರಾದರೂ ಅಂಕೆ ಮೀರಿದರೆ ಮತ್ತಷ್ಟು ಸೀತಾಲಕುಕುಚಿ ನಿರ್ಮಾಣವಾಗಲಿವೆ. ಅಲ್ಲಿ ಏನಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಹೀಗಾಗಿ ಎಚ್ಚರಿಕೆಯಿಂದಿರಿ’ ಎಂದು ಘೋಷ್ ಹೇಳಿದ್ದರು.

ಮುಂದುವರಿದು, ಸಿಐಎಸ್‌ಎಫ್ ಸಿಬ್ಬಂದಿ ಕೈಯ್ಯಲ್ಲಿ ಬಂದೂಕಿರುವುದು ಕೇವಲ ಪ್ರದರ್ಶನಕ್ಕಲ್ಲ ಎಂದೂ ಹೇಳಿದ್ದರು.

‘ಇದು ಆರಂಭವಷ್ಟೆ. ಕೇಂದ್ರದ ಪಡೆಗಳು ಕೇವಲ ಪ್ರದರ್ಶನಕ್ಕಿವೆ ಎಂದು ಭಾವಿಸಿದವರೀಗ ಅವರ ಬಂದೂಕುಗಳು ಯಾಕಿವೆ ಎಂಬುದು ಗೊತ್ತಾಗಿದೆ. ಇದು ಬಂಗಾಳದಾದ್ಯಂತ ನಡೆಯಲಿದೆ.ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ ತಕ್ಕ ಪ್ರತಿಕ್ರಿಯೆ ದೊರೆಯಲಿದೆ. ಆ ದಿನಗಳು ಬೇಗ ಬರಲಿವೆ ಎಂದು ಭಾವಿಸಿದ್ದೇನೆ’ ಎಂದೂ ಅವರು ಹೇಳಿದ್ದರು.

ಭಾಷಣದ ವಿಡಿಯೊ ಭಾನುವಾರ ವೈರಲ್ ಆಗಿತ್ತಲ್ಲದೆ, ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಅವರ ಬಂಧನಕ್ಕೂ ಆಗ್ರಹ ವ್ಯಕ್ತವಾಗಿತ್ತು.

ಈ ಮಧ್ಯೆ, ಸೀತಾಲಕುಚಿ ಘಟನೆಗೆ ಸಂಬಂಧಿಸಿ ಸಿಐಎಸ್ಎಫ್‌ ಪಡೆಗಳಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.