ADVERTISEMENT

‘ಮೋದಿ ಸೇನೆ’ ಹೇಳಿಕೆ: ವರದಿ ಕೇಳಿದ ಆಯೋಗ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:09 IST
Last Updated 2 ಏಪ್ರಿಲ್ 2019, 20:09 IST
ರಾಮದಾಸ್
ರಾಮದಾಸ್   

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದಿದ್ದರು ಎಂಬುದರ ಕುರಿತು ವರದಿ ನೀಡುವಂತೆ ಗಾಜಿಯಾಬಾದ್ ಜಿಲ್ಲಾಡಳಿತಕ್ಕೆ ಮುಖ್ಯ ಚುನಾವಣಾಧಿಕಾರಿ ಎಲ್. ವೆಂಕಟೇಶ್ವರಲು ಸೂಚನೆ ನೀಡಿದ್ದಾರೆ.

ಯೋಗಿ ನೀಡಿದ್ದ ಹೇಳಿಕೆ ಸೇನೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಚುನಾವಣಾ ಪ್ರಚಾರದ ವೇಳೆ ಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಹೆಸರು ಬಳಸಿಕೊಳ್ಳದಂತೆ ಚುನಾವಣಾ ಆಯೋಗವು ಮಾರ್ಚ್ 9ರಂದು ರಾಜ ಕೀಯ ಪಕ್ಷಗಳಿಗೆ ಸೂಚನೆ ನೀಡಿತ್ತು.

ADVERTISEMENT

ವಾಯುಪಡೆ ನಿವೃತ್ತ ಮುಖ್ಯಸ್ಥ ಕಿಡಿ: ಯೋಗಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಲ್.ರಾಮದಾಸ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ‘ಸಶಸ್ತ್ರ ಪಡೆಗಳು ಖಾಸಗಿ ಪಡೆಗಳಲ್ಲ’ ಎಂದಿದ್ದಾರೆ.

‘ಬೇಜವಾಬ್ದಾರಿ ಹೇಳಿಕೆ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಅವರು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಅವರಿಗೆ ಪತ್ರ ಬರೆದಿದ್ದಾರೆ.

‘ಬಾಲಾಕೋಟ್ ಘಟನೆ ಬಳಿಕ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಆಕ್ಷೇಪಿಸಿ ರಾಮದಾಸ್ ಅವರು ಮಾರ್ಚ್ 6ರಂದೇ ಆಯೋಗಕ್ಕೆ ಪತ್ರ ಬರೆದಿದ್ದರು.

‘ಇದೀಗ ಆದಿತ್ಯನಾಥ ಅವರ ಹೇಳಿಕೆ ಗಮನಿಸಿದರೆ, ಕಳೆದ ತಿಂಗಳು ನಾನು ಇಂತಹ ಹೇಳಿಕೆ ನೀಡುವ ಸಾಧ್ಯತೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದು ನಿಜವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.