ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬುಧವಾರ ಬಂಧಿಸಿದ್ದು, ತಮ್ಮ ಬಂಧನ ಪ್ರಶ್ನಿಸಿ ಸೊರೇನ್ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೊರೇನ್ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಅನುಭಾ ರಾವತ್ ಚೌಧರಿ ಅವರ ಪೀಠವು ಇಂದು (ಗುರುವಾರ) ಬೆಳಿಗ್ಗೆ 10.30ಕ್ಕೆ ವಿಚಾರಣೆ ನಡೆಸಲಿದೆ.
ಸುಮಾರು ₹600 ಕೋಟಿ ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದ ಹಿನ್ನೆಲೆ ಏಳು ಗಂಟೆಗಳ ಕಾಲ ಸೊರೇನ್ ವಿಚಾರಣೆಗೆ ಒಳಗಾಗಿದ್ದರು. ಬಳಿಕ ಇ.ಡಿ ಅವರನ್ನು ಬಂಧಿಸಿದೆ. ಬಂಧನಕ್ಕೂ ಮುನ್ನಾ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಿನ್ನೆಲೆ: ಭೂಮಿಯ ಮಾಲೀಕತ್ವದ ಬದಲಾವಣೆ ವಹಿವಾಟು ಹಿಂದೆ ದೊಡ್ಡ ಮಾಫಿಯಾ ಇದ್ದು, ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ತನಿಖೆ ನಡೆಯುತ್ತಿದೆ.
ಈ ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಸದ್ಯ 2011ನೇ ತಂಡದ ಐಎಎಸ್ ಅಧಿಕಾರಿ ಛಾವಿ ರಂಜನ್, ಜಾರ್ಖಂಡ್‌ನ ಕಂದಾಯ ಇಲಾಖೆಯ ಸಿಬ್ಬಂದಿ ಭಾನುಪ್ರಸಾದ್ ಪ್ರಸಾದ್ ಸೇರಿ 14 ಜನರನ್ನು ಬಂಧಿಸಿದ್ದಾರೆ. ಬಂಧಿತ ಐಎಎಸ್ ಅಧಿಕಾರಿ ರಾಂಚಿಯಲ್ಲಿ ಜಿಲ್ಲಾಧಿಕಾರಿಯಾಗಿ, ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಅಧಿಕೃತ ಭೂ ದಾಖಲೆಗಳನ್ನು ತಿರುಚಿ ಭೂಮಿಯ ಮಾರಾಟಗಾರರು, ಖರೀದಿದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಸ್ವಾಧೀನ ಪಡೆಯಲಾಗಿದೆ ಎಂಬುದು ತನಿಖಾ ಸಂಸ್ಥೆ ಇ.ಡಿ ಆರೋಪವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.