ADVERTISEMENT

₹ 240 ಕೋಟಿ ವಂಚನೆ: ಜಾರಿ ನಿರ್ದೇಶನಾಲಯ ವಶಕ್ಕೆ ಲೇವಾದೇವಿದಾರ

ಪಿಟಿಐ
Published 9 ಮೇ 2023, 13:16 IST
Last Updated 9 ಮೇ 2023, 13:16 IST
.
.   

ನವದೆಹಲಿ (ಪಿಟಿಐ): ತಾವು ಪಾವತಿಸಿದ ಠೇವಣಿಗೆ ಹೆಚ್ಚು ಹಣ ಮರಳಿ ನೀಡುವುದಾಗಿ 1,000ಕ್ಕೂ ಹೆಚ್ಚು ಮಂದಿಯನ್ನು ನಂಬಿಸಿ ₹ 240 ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಲೇವಾದೇವಿದಾರ, ಕೆಚೇರಿ ಎಂಟರ್‌ಪ್ರೈಸ್‌ನ ಮಾಲೀಕ ವೇಣುಗೋಪಾಲ್‌ ಎಸ್‌. ಎಂಬಾತನನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ಬಂಧಿಸಿದೆ.

ಹಣ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದ ಬಳಿಕ ವೇಣುಗೋಪಾಲ್‌ನನ್ನು ಇ.ಡಿ ತನ್ನ ಕಸ್ಟಡಿಗೆ ಪಡೆದಿದೆ.

‘ಸಾರ್ವಜನಿಕರಿಂದ ಪಡೆದ ಹಣವನ್ನು ವೇಣುಗೋಪಾಲ್‌ ಪುನಃ ಅವರಿಗೆ ಮರಳಿಸದೇ ಮೋಸ ಮಾಡಿದ್ದಾನೆ’ ಎಂದು ಆರೋಪಿಸಲಾಗಿತ್ತು. ಈ ಆರೋಪದ ಬೆನ್ನಲ್ಲೇ, ಸಾರ್ವಜನಿಕರಿಂದ ₹ 240 ಕೋಟಿ ಹಣ ಸಂಗ್ರಹಿಸಿದ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್‌ನನ್ನು ಪಿಎಂಎಲ್‌ಎ ನ್ಯಾಯಾಲಯ ನಾಲ್ಕು ದಿನಗಳ ಕಾಲ ಇ.ಡಿ ವಶಕ್ಕೆ ನೀಡಿದೆ.

ADVERTISEMENT

‘ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವ ವೇಳೆ, ಪ್ರತಿವರ್ಷವೂ ಶೇ 15ರಿಂದ 18 ರಷ್ಟು ಹೆಚ್ಚು ಆದಾಯದೊಂದಿಗೆ ಅವರ ಹಣವನ್ನು ಪ್ರತಿ ವರ್ಷ ಮರಳಿ ನೀಡುವುದಾಗಿ ವೇಣುಗೋಪಾಲ್‌ ಹೇಳುತ್ತಿದ್ದ. ಅಲ್ಲದೇ ತನ್ನ ಕೆಚೇರಿ ಎಂಟರ್‌ಪ್ರೈಸ್‌ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ಮಾನ್ಯತೆ ಪಡೆದಿದೆ ಎಂಬುದಾಗಿಯೂ ನಂಬಿಸುತ್ತಿದ್ದ’ ಎಂದು ಇ.ಡಿ ಆರೋಪಿಸಿದೆ.

‘ಕೇರಳ ಮಾತ್ರವಲ್ಲದೇ ಸುತ್ತಮುತ್ತಲ ರಾಜ್ಯದ ಮಂದಿಗೂ ವೇಣುಗೋಪಾಲ್‌ ವಂಚಿಸಿದ್ದಾನೆ. ವಂಚನೆ ಹಗರಣದ ಕುರಿತ ತನಿಖೆ ಪ್ರಗತಿಯಲ್ಲಿದೆ’ ಎಂದು ಅದು ಹೇಳಿದೆ.

ಇದಕ್ಕೂ ಮೊದಲು, ತನ್ನ ಹಾಗೂ ಕೆಚೇರಿ ವಿರುದ್ಧ ಮೊದಲೇ ತನಿಖೆ ಆರಂಭಿಸಿದ್ದ ಕೇರಳದ ಕೊಲ್ಲಂ ಜಿಲ್ಲೆಯ ಪುನಲುರ್‌ ಠಾಣೆಯ ಪೊಲೀಸರ ವಶದಲ್ಲಿ ವೇಣುಗೋಪಾಲ್‌ ಇದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.