ADVERTISEMENT

₹1034 ಕೋಟಿ ಭೂ ಹಗರಣದಲ್ಲಿ ಸಂಜಯ್ ರಾವುತ್‌ ಆಸ್ತಿ ಜಪ್ತಿ: ಮೌಲ್ಯವೆಷ್ಟು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 10:25 IST
Last Updated 5 ಏಪ್ರಿಲ್ 2022, 10:25 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌    

ಮುಂಬೈ: ಶಿವಸೇನೆಯ ರಾಜ್ಯಸಭೆಯ ಸಂಸದ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಆಪ್ತ ಸಂಜಯ್ ರಾವುತ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾವತ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ‘ಅಕ್ರಮ ಹಣ ವರ್ಗಾವಣೆ ತಡೆ’ ಕಾನೂನಿನ ಅಡಿಯಲ್ಲಿ ಜಪ್ತಿ ಮಾಡಿದೆ.

ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ ₹9 ಕೋಟಿ ಮೌಲ್ಯದ ಭೂಮಿ ಮತ್ತು ಮುಂಬೈನ ದಾದರ್ ಉಪನಗರದಲ್ಲಿರುವ ₹2 ಕೋಟಿ ಮೌಲ್ಯದ ಫ್ಲ್ಯಾಟ್‌ ಜಪ್ತಿಯಾಗಿವೆ.

₹1,034 ಕೋಟಿ ಮೌಲ್ಯದ ಮುಂಬೈನ ‘ಪತ್ರಾ ಚಾಲ್’ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವುತ್‌ ಅವರ ಈ ಆಸ್ತಿಗಳನ್ನೂ ಸೇರಿಸಲಾಗಿದೆ.

ADVERTISEMENT

ಇದಾದ ಕೆಲವೇ ಗಂಟೆಗಳಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿರುವ ಸಂಜಯ್‌ ರಾವುತ್‌ ‘ಅಸತ್ಯಮೇವ ಜಯತೇ!!!’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಹಿಂದೆ ರಾವುತ್‌ ಪತ್ನಿ ವರ್ಷಾ ರಾವುತ್‌ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿತ್ತು.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಆಪ್ತರೂ, ಮಹಾವಿಕಾಸ ಅಘಾಡಿಸರ್ಕಾರದ ‘ಟ್ರಬಲ್‌ ಶೂಟರ್‌’ ಎಂದೇ ಕರೆಯಲಾಗುವ ರಾವುತ್‌ ಅವರಿಗೇ ಇ.ಡಿಯಿಂದ ಸಂಕಷ್ಟ ಎದುರಾಗಿರುವುದು ಮಹಾರಾಷ್ಟ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.