ADVERTISEMENT

ಚೀನಾ ಪ್ರಜೆಗಳಿಗೆ ವೀಸಾ: ತಮಿಳುನಾಡಿನ ಆರು ಸ್ಥಳಗಳಲ್ಲಿ ಇ.ಡಿ ಶೋಧ

ಪಿಟಿಐ
Published 5 ಆಗಸ್ಟ್ 2022, 13:52 IST
Last Updated 5 ಆಗಸ್ಟ್ 2022, 13:52 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಚೀನಾದ 263 ಮಂದಿಗೆ ವೀಸಾ ನೀಡುವ ವೇಳೆ ನಡೆದಿರುವ ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಮಿಳುನಾಡಿನ ಆರು ಸ್ಥಳಗಳಲ್ಲಿ ಶೋಧ ನಡೆಸಿದೆ. ಇದರಲ್ಲಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕೆಲ ಕಂಪನಿ ಮತ್ತು ಅವುಗಳ ಪ್ರವರ್ತಕರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.ಇದೇ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ಇ.ಡಿ ಮೇ ತಿಂಗಳಲ್ಲಿ ತನಿಖೆ ಆರಂಭಿಸಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿತ್ತು.

ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದ ಸಿಬಿಐ, ಚಿದಂಬರಂ ಕುಟುಂಬಕ್ಕೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಭಾಸ್ಕರ್‌ರಾಮನ್‌ ಅವರನ್ನು ಬಂಧಿಸಿತ್ತು.

ADVERTISEMENT

ಈ ಆರೋಪ ನಿರಾಕರಿಸಿರುವ ಕಾರ್ತಿ ಚಿದಂಬರಂ, ‘ಇದು ಕಿರುಕುಳ ಅಲ್ಲದೆ ಮತ್ತೇನು?. 250 ಮಂದಿ ಹೊರತು ಪಡಿಸಿ ವೀಸಾ ಪ್ರಕ್ರಿಯೆಯಲ್ಲಿ ಚೀನಾದ ಒಬ್ಬ ಪ್ರಜೆಗೂ ಅನುಕೂಲ ಕಲ್ಪಿಸಿಕೊಟ್ಟಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿರುವ ವೇದಾಂತ ಗ್ರೂಪ್ ಕಂಪನಿ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್‌ನ (ಟಿಎಸ್‌ಪಿಎಲ್) ಉನ್ನತ ಅಧಿಕಾರಿಗಳಿಂದ ಶಿವಗಂಗಾ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಮತ್ತು ಅವರ ನಿಕಟವರ್ತಿ ಎಸ್. ಭಾಸ್ಕರ ರಾಮನ್‌ಗೆ ಕಿಕ್‌ ಬ್ಯಾಕ್ ಆಗಿ ₹50 ಲಕ್ಷ ಪಾವತಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಸಿಬಿಐ ಪ್ರಕಾರ, ಪವರ್ ಪ್ರಾಜೆಕ್ಟ್‌ನ ಕೆಲಸವನ್ನು ಚೀನಾ ಕಂಪನಿ ಕಾರ್ಯಗತಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.