ADVERTISEMENT

ಜಾಮೀನು ಹಕ್ಕು ನಿರಾಕರಣೆ ತಪ್ಪು: ಸುಪ್ರೀಂ ಕೋರ್ಟ್‌

ಪೂರಕ ದೋಷಾರೋಪಪಟ್ಟಿ ಸಲ್ಲಿಕೆ: ಇ.ಡಿ. ನಡೆಗೆ ‘ಸುಪ್ರೀಂ’ ಆಕ್ಷೇಪ

ಪಿಟಿಐ
Published 21 ಮಾರ್ಚ್ 2024, 0:30 IST
Last Updated 21 ಮಾರ್ಚ್ 2024, 0:30 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವಿಚಾರಣೆಗೆ ಗುರಿಪಡಿಸದೆ ಇದ್ದರೂ ಆರೋಪಿಯನ್ನು ವಶದಲ್ಲಿ ಇರಿಸಿಕೊಳ್ಳುವುದು ಬಂಧನಕ್ಕೆ ಸಮ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹಣದ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ಮೂಲಕ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಿಗಳು ಜಾಮೀನು ಪಡೆಯುವ ಹಕ್ಕನ್ನು ಕಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಜಾರ್ಖಂಡ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ನಾಲ್ಕು ಬಾರಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಕ್ಕೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ವಿಭಾಗೀಯ ಪೀಠವು ಆಕ್ಷೇಪ ವ್ಯಕ್ತಪಡಿಸಿತು.

ತನಿಖಾ ಸಂಸ್ಥೆಗಳು ಕಾಲಮಿತಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣಕ್ಕೆ ಜಾಮೀನು ಕೋರಿ ಪ್ರೇಮ್ ಪ್ರಕಾಶ್ ಎಂಬ ಆರೋಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಪ್ರಕಾಶ್ ಅವರು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಎನ್ನಲಾಗಿದೆ.

ADVERTISEMENT

ಪ್ರಕಾಶ್ ಅವರನ್ನು 2022ರ ಆಗಸ್ಟ್‌ನಲ್ಲಿ ಬಂಧಿಸಲಾಗಿದೆ. ಅವರ ಮನೆಯಲ್ಲಿ ಶೋಧ ನಡೆಸಿದಾಗ ಎ.ಕೆ–47 ಬಂದೂಕುಗಳು, ಸಜೀವ ಗುಂಡುಗಳು ದೊರೆತಿವೆ ಎನ್ನಲಾಗಿದೆ. ಹಣದ ಅಕ್ರಮ ವರ್ಗಾವಣೆ ಆರೋಪದ ಅಡಿಯಲ್ಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಾಲ್ಕು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರವೂ ಈ ಪ್ರಕರಣದಲ್ಲಿ ತನಿಖೆಯು ಇನ್ನೂ ಮುಂದುವರಿಯುತ್ತಿದೆ ಎಂದು ಪೀಠವು ಇ.ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಹೇಳಿತು. 

‘ವಿಚಾರಣೆ ಶುರುವಾಗದ ಹೊರತು ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಂತಿಲ್ಲ. ಹಾಗೆ ಮಾಡುವುದು ಬಂಧನಕ್ಕೆ ಸಮ ಆಗುತ್ತದೆ, ಅದು ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ’ ಎಂದು ಪೀಠವು ಹೇಳಿತು. ಪೂರಕ ದೋಷಾರೋಪಪಟ್ಟಿ ಸಲ್ಲಿಸುವ ಮೂಲಕ ವ್ಯಕ್ತಿಯ ಜಾಮೀನಿನ ಹಕ್ಕನ್ನು ನಿರಾಕರಿಸಲು ಆಗದು ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಆರೋಪಿಯು 18 ತಿಂಗಳುಗಳಿಂದ ಜೈಲಿನಲ್ಲಿ ಇದ್ದಾರೆ. ಪೂರಕ ದೋಷಾರೋಪ ಪಟ್ಟಿಯನ್ನು ಒಂದಾದ ನಂತರ ಒಂದರಂತೆ ಸಲ್ಲಿಸಲಾಗುತ್ತಿದೆ. ಇದರ ಪರಿಣಾಮವಾಗಿ ವಿಚಾರಣೆಯು ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.

‘ನಮ್ಮನ್ನು ಚಿಂತೆಗೆ ಈಡುಮಾಡಿರುವುದೇ ಇದು. ಕಾಲಮಿತಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದಾಗ ಜಾಮೀನು ಪಡೆಯುವುದು ಆರೋಪಿಯ ಹಕ್ಕು. ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸುತ್ತ ಈ ಹಕ್ಕನ್ನು ನಿರಾಕರಿಸಲು ಆಗದು’ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

‘ನಾವು ಇದನ್ನು ಮನೀಶ್ ಸಿಸೋಡಿಯಾ ಪ್ರಕರಣದಲ್ಲಿಯೂ ಹೇಳಿದ್ದೇವೆ. ಜೈಲುವಾಸ ಸುದೀರ್ಘವಾದಾಗ, ವಿಚಾರಣೆ ಆರಂಭವಾಗುವುದು ಅನಗತ್ಯವಾಗಿ ವಿಳಂಬವಾದಾಗ ನ್ಯಾಯಾಲಯವು ಜಾಮೀನು ಮಂಜೂರು ಮಾಡಬಹುದು’ ಎಂದು ಅವರು ವಿವರಿಸಿದರು. ವಿಚಾರಣೆಯನ್ನು ಏಪ್ರಿಲ್‌ 29ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.