ನವದೆಹಲಿ: ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಪಾಕಿಸ್ತಾನದ ವ್ಯಕ್ತಿಯ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಚಾರ್ಜ್‌ಶೀಟ್ ಸಲ್ಲಿಸಿದೆ. ಭಾರತದ ಗುರುತಿನ ಚೀಟಿಗಳಾದ ಆಧಾರ್, ಮತದಾರರ ಚೀಟಿ ಹಾಗೂ ಪಾಸ್‌ಪೋರ್ಟ್ ಅನ್ನು ಅಕ್ರಮವಾಗಿ ಹೊಂದಿದ್ದ ಈತ ಕೋಲ್ಕತ್ತದಲ್ಲಿ ಭಾರತೀಯ ಎಂಬ ಗುರುತಿನಲ್ಲಿ ವಾಸಿಸುತ್ತಿದ್ದ ಎಂದು ತಿಳಿಸಿದೆ.
‘ಇದಲ್ಲದೇ, ಬಾಂಗ್ಲಾದೇಶದ ನಾಗರಿಕರಿಗೆ ‘ನಕಲಿ’ ಭಾರತದ ಗುರುತಿನ ಚೀಟಿಗಳನ್ನು ತಯಾರಿಸಿಕೊಡುವ ಮೂಲಕ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ. ಆ ಗುರುತಿನ ಚೀಟಿ ಪಡೆದು ಭಾರತಕ್ಕೆ ಬರುತ್ತಿದ್ದವರು ಹವಾಲಾ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು’ ಎಂದು ತನಿಖಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 13ರಂದು ಕೋಲ್ಕತ್ತದ ಹಣ ಅಕ್ರಮ ವರ್ಗಾವಣೆ ವಿಶೇಷ ನ್ಯಾಯಾಲಯದ ಎದುರು ಆರೋಪಿಗಳಾದ ಆಜಾದ್ ಮಲ್ಲಿಕ್ ಅಲಿಯಾಸ್ ಅಹಮ್ಮದ್ ಹೊಸೈನ್, ಅಜಾದ್ ಹೊಸೈನ್ ಅವರನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವಂತೆ ಇ.ಡಿ ಮನವಿ ಮಾಡಿದೆ. ಬೇಡಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗಳ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಮಲ್ಲಿಕ್ ಮನೆ ಮೇಲೆ ಇ.ಡಿ ದಾಳಿ ನಡೆಸಿತ್ತು. ಆರಂಭದಲ್ಲಿ ಬಾಂಗ್ಲಾದೇಶದ ನಾಗರಿಕ ಎಂದು ಹೇಳಲಾಗಿತ್ತು. ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಪಾಕಿಸ್ತಾನದ ನಾಗರಿಕ ಎಂದು ತಿಳಿದುಬಂದಿತ್ತು ಎಂದು ಇ.ಡಿ ತಿಳಿಸಿದೆ.
ವಿದೇಶಿಯರ ಕಾಯ್ದೆ ಉಲ್ಲಂಘನೆ–1946ರ ಅಡಿಯಲ್ಲಿ ಮಲ್ಲಿಕ್ ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.