ರಾಹುಲ್ ಗಾಂಧಿ
- ರಾಯಿಟರ್ಸ್
ನವದೆಹಲಿ: ಸಂಸತ್ತಿನಲ್ಲಿ ಈಚೆಗೆ ಭಾಷಣದಲ್ಲಿ 'ಚಕ್ರವ್ಯೂಹ'ದ ಹೇಳಿಕೆ ನೀಡಿದ್ದಕ್ಕೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಿಂದ (ಇ.ಡಿ) ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಆರೋಪಿಸಿದ್ದಾರೆ.
‘ಇ.ಡಿ ಅಧಿಕಾರಿಗಳು ಶೋಧಕ್ಕೆ ಬಂದಾಗ ಅವರನ್ನು ಸಂತಸದಿಂದ ಸ್ವಾಗತಿಸಲು ಸಿದ್ಧನಾಗಿದ್ದೇನೆ’ ಎಂದೂ ಹೇಳಿದ್ದಾರೆ.
‘ಸಂಸತ್ತಿನಲ್ಲಿ ಚಕ್ರವ್ಯೂಹವನ್ನು ಪ್ರಸ್ತಾಪಿಸಿ ನಾನು ಮಾಡಿದ ಭಾಷಣ ಕೆಲವರಿಗೆ ಇಷ್ಟವಾಗಿಲ್ಲ. ಆದ್ದರಿಂದ ನನ್ನ ವಿರುದ್ಧ ದಾಳಿಗೆ ಯೋಜನೆ ರೂಪಿಸಲಾಗಿದೆ ಎಂದು ಇ.ಡಿಯಲ್ಲಿರುವ ಕೆಲವರು ಮಾಹಿತಿ ನೀಡಿದ್ದಾರೆ’ ಎಂದು ಶುಕ್ರವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಚಹಾ ಮತ್ತು ಬಿಸ್ಕತ್ ಇಟ್ಟುಕೊಂಡು ಇ.ಡಿ ಅಧಿಕಾರಿಗಳನ್ನು ಸ್ವಾಗತಿಸಲು ಕಾಯುತ್ತಿದ್ದೇನೆ’ ಎಂದಿದ್ದಾರೆ.
‘ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಮಣಿಸಲು ಕೌರವರು ಚಕ್ರವ್ಯೂಹ ನಿರ್ಮಿಸಿದ ಹಾಗೆ ಬಿಜೆಪಿಯು ದೇಶ
ದಲ್ಲಿ ರೈತರು ಮತ್ತು ಯುವಕರ ಸುತ್ತ ಚಕ್ರವ್ಯೂಹ ಹೆಣೆದು, ಭಯದ ವಾತಾವರಣ ನಿರ್ಮಿಸಿದೆ’ ಎಂದು ರಾಹುಲ್ ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಹೇಳಿದ್ದರು.
‘ಕೌರವರು ಚಕ್ರವ್ಯೂಹ ನಿರ್ಮಿಸಿ ಅಭಿಮನ್ಯುವನ್ನು ಕೊಂದರು. 21ನೇ ಶತಮಾನದಲ್ಲಿ ಮತ್ತೊಂದು ಚಕ್ರವ್ಯೂಹ ಸಿದ್ಧಗೊಂಡಿದೆ. ಅದು ಕಮಲದ (ಬಿಜೆಪಿ) ರೂಪದಲ್ಲಿದೆ. ಅಂದು ಅಭಿಮನ್ಯುವಿಗೆ ಮಾಡಿದ್ದನ್ನು ಇಂದು ಯುವಕರು, ಮಹಿಳೆಯರು, ರೈತರ ಮೇಲೆ ಮಾಡಲಾಗುತ್ತಿದೆ’ ಎಂದು ದೂರಿದ್ದರು.
‘ಹೊಣೆಗಾರಿಕೆಯಿಂದ ನುಣುಚುವ ಯತ್ನ’
ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ವಯನಾಡ್ ಭೂಕುಸಿತ ದುರಂತದ ಬಗ್ಗೆ ತನ್ನನ್ನು ಪ್ರಶ್ನಿಸುವ ಜನರ ಗಮನ ಬೇರೆಡೆ ಸೆಳೆಯಲು ಅವರು ಹೊಸ ನಿರೂಪಣೆಯೊಂದನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದೆ.
‘ವಯನಾಡ್‌ನ ಜನರು ನಿಮ್ಮ ಹೊಣೆಗಾರಿಕೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ರಾಹುಲ್‌ಗೆ ಯಾರೋ ಹೇಳಿದ್ದಾರೆ. ಆದ್ದರಿಂದ ಇಂತಹ ಕಪೋಲ ಕಲ್ಪಿತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಮಿತ್ರಪಕ್ಷ ಜೆಡಿಯು ನಾಯಕರಾಗಿರುವ ಕೇಂದ್ರ ಸಚಿವ ಲಲನ್ ಸಿಂಗ್ ಅವರೂ ರಾಹುಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ರಾಹುಲ್ ಏನಾದರೂ ತಪ್ಪು ಮಾಡಿರಬಹುದು. ಆದ್ದರಿಂದ ತಮ್ಮ ವಿರುದ್ಧ ಕ್ರಮ ಜರುಗಬಹುದು ಎಂದು ಭಾವಿಸಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.