ADVERTISEMENT

ಲುಕ್ ಔಟ್ ನೋಟಿಸ್ ವಿರುದ್ಧ ಪತ್ರಕರ್ತೆ ರಾಣಾ ಅಯ್ಯೂಬ್ ಅರ್ಜಿ: ಇ.ಡಿ ವಿರೋಧ

ಪಿಟಿಐ
Published 1 ಏಪ್ರಿಲ್ 2022, 11:34 IST
Last Updated 1 ಏಪ್ರಿಲ್ 2022, 11:34 IST
ರಾಣಾ ಅಯ್ಯೂಬ್
ರಾಣಾ ಅಯ್ಯೂಬ್   

ನವದೆಹಲಿ: ವಿದೇಶ ಪ್ರವಾಸಕ್ಕೆ ತಡೆನೀಡಿ ತಮ್ಮ ವಿರುದ್ಧ ಹೊರಡಿಸಲಾದ ಲುಕ್ ಔಟ್ ನೋಟಿಸ್ (ಎಲ್‌ಒಸಿ) ಅನ್ನು ರದ್ದುಗೊಳಿಸುವಂತೆ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ.

ಸುಮಾರು ₹1 ಕೋಟಿಗೂ ಹೆಚ್ಚಿನ ಹಣದ ಅವ್ಯವಹಾರದ ಗಂಭೀರ ಅಪರಾಧ ಪ್ರಕರಣದಲ್ಲಿ ರಾಣಾ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಹೈಕೋರ್ಟ್‌ ಗಮನಕ್ಕೆ ತಂದಿತು.

ಕೋವಿಡ್ ಪರಿಹಾರಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಹಣದಲ್ಲಿ ರಾಣಾ ಅವರು ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ಡಾಲರ್ ರೂಪದಲ್ಲೂ ಹಣ ಸ್ವೀಕರಿಸಿದ್ದಾರೆ. ಇದಕ್ಕಾಗಿ ರಾಣಾ ಕೆಲವು ನಕಲಿ ಬಿಲ್‌ಗಳನ್ನೂ ಸಲ್ಲಿಸಿದ್ದಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ಎಸ್.ವಿ. ರಾಜು ಮತ್ತು ಇ.ಡಿ ಪರ ವಕೀಲ ಅಮಿತ್ ಮಹಾಜನ್ ಅವರು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ.

ADVERTISEMENT

ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಕೆಲವು ವಿಷಯಗಳ ಕುರಿತ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿ, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದರು.

ಮಾರ್ಚ್ 29ರಂದು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗಹಿಸಲು ರಾಣಾ ಅವರು ಲಂಡನ್‌ಗೆ ತೆರಳಬೇಕಿತ್ತು. ಆದರೆ, ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿತ್ತು. ಹಾಗಾಗಿ, ರಾಣಾ ಅವರು ತಮ್ಮ ವಿರುದ್ಧದ ಎಲ್‌ಒಸಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.