
ನವದೆಹಲಿ : ‘ಐ–ಪ್ಯಾಕ್’ ಕಚೇರಿಯಲ್ಲಿ ಜನವರಿ 8ರಂದು ಶೋಧ ನಡೆಸುವ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ 18ಕ್ಕೆ ಮುಂದೂಡಿದೆ.
‘ಇ.ಡಿ ಶೋಧದ ವೇಳೆ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದು ಅತಿ ಗಂಭೀರ ವಿಷಯ ಎಂದು ಸುಪ್ರೀಂ ಕೋರ್ಟ್ ಜನವರಿ 15ರಂದು ಹೇಳಿತ್ತು. ಇದರ ಬೆನ್ನಲ್ಲೇ, ಇ.ಡಿ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ದಾಖಲಿಸಿದ್ದ ಎಫ್‌ಐಆರ್‌ಗೂ ನ್ಯಾಯಾಲಯವು ತಡೆ ನೀಡಿತ್ತು.
ಬುಧವಾರ ವಿಚಾರಣೆ ವೇಳೆ ‘ಲೋಪ ಸರಿಪಡಿಸಿಕೊಂಡು ಇಂದೇ ಪ್ರತ್ಯುತ್ತರ ಸಲ್ಲಿಸಲಾಗುವುದು’ ಎಂದು ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಗಮಕ್ಕೆ ತಂದರು. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ, ಕೆ.ವಿ ವಿಶ್ವನಾಥನ್ ಅವರು ವಿಚಾರಣೆಯನ್ನು ಮುಂದೂಡಿದರು.
ಐ–ಪ್ಯಾಕ್ ಕಚೇರಿ ಆವರಣದಲ್ಲಿ ದಾಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ, ಡಿಜಿಪಿ ರಾಜೀವ್ ಕುಮಾರ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಇ.ಡಿ ಮನವಿ ಮಾಡಿದ್ದು, ಆರೋಪಿಗಳಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಐ–ಪ್ಯಾಕ್ ಕಚೇರಿ ಮೇಲೆ ಇ.ಡಿ ದಾಳಿಯ ಸಂದರ್ಭದ ಸಿ.ಸಿ.ಟಿ.ವಿ. ದೃಶ್ಯಾವಳಿಗಳನ್ನು ಸಂರಕ್ಷಿಸಿ ಇಡುವಂತೆಯೂ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚನೆ ನೀಡಿದೆ.
ಮಮತಾ ಬ್ಯಾನರ್ಜಿ ಅವರು, ಐ–ಪ್ಯಾಕ್ ಕಚೇರಿಯಿಂದ ಕೆಲವು ಕಡತಗಳು, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ‘ಸೂಕ್ಷ್ಮ’ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇ.ಡಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.