ರಾಯಪುರ: ಅಬಕಾರಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಬಘೇಲ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೆಶನಾಲಯವು(ಇ.ಡಿ) ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೈತನ್ಯ ತಮ್ಮ ತಂದೆ ಜೊತೆ ವಾಸವಿರುವ ಭಿಲಾಯಿ ಪಟ್ಟಣದ ಮನೆ ಮೇಲೆ ದಾಳಿ ನಡೆದಿದೆ. ಹೊಸ ಸಾಕ್ಷ್ಯ ಕಲೆ ಹಾಕಿರುವ ಇ.ಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ದಾಳಿ ನಡೆಸಿದೆ.
ಈ ವರ್ಷದ ಮಾರ್ಚ್ ತಿಂಗಳಿನಲ್ಲೂ ಚೈತನ್ಯ ಬಘೇಲ್ ಅವರಿಗೆ ಸಂಬಂಧಿತ ಪ್ರದೇಶಗಳ ಮೇಲೆ ಇ.ಡಿ ದಾಳಿ ನಡೆಸಿತ್ತು.
ವಿಧಾನಸಭೆ ಅಧಿವೇಶನದ ಕೊನೆಯ ದಿನ ಇ.ಡಿ ಅಧಿಕಾರಿಗಳು ನಮ್ಮ ಮನೆಗೆ ಆಗಮಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ಧಾರೆ.
ಚೈತನ್ಯ ಬಘೇಲ್ ಅವರು ಮದ್ಯ ಹಗರಣದ ಅಪರಾಧದಲ್ಲಿ ಹಣ ಪಡೆದಿರುವುದಾಗಿ ಶಂಕಿಸಲಾಗಿದೆ ಎಂದು ಇ.ಡಿ ಹೇಳಿತ್ತು.
ಛತ್ತೀಸಗಢದ ಮದ್ಯ ಹಗರಣದಿಂದ ರಾಜ್ಯ ಖಜಾನೆಗೆ ಭಾರಿ ನಷ್ಟ ಉಂಟಾಗಿದೆ. ಮದ್ಯದ ಸಿಂಡಿಕೇಟ್‌ನ ಫಲಾನುಭವಿಗಳಿಗೆ ಈ ಹಗರಣದಲ್ಲಿ ₹2,100 ಕೋಟಿ ಲಾಭ ಆಗಿದೆ ಎಂದು ಅದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.