
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ), ₹5.12 ಕೋಟಿ ನಗದು, ₹8.80 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಹೊಂದಿದ ಸೂಟ್‌ಕೇಸ್ ಮತ್ತು ₹35 ಕೋಟಿ ಮೌಲ್ಯದ ಆಸ್ತಿಗೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಹರಿಯಾಣ ಮೂಲದ ಇಂದರ್ಜಿತ್ ಸಿಂಗ್ ಯಾದವ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರ್‌ನಲ್ಲಿರುವ ವಸತಿ ಆವರಣಕ್ಕೆ ಇ.ಡಿ ದಾಳಿ ನಡೆಸಿತು.
ಯುಎಇಯಿಂದ ಯಾದವ್ ಕಾರ್ಯನಿರ್ವಹಿಸುತ್ತಿದ್ದು, ಆತನ ಸಹಚರ ಅಮನ್ ಕುಮಾರ್‌ಗೆ ಸಂಬಂಧಿಸಿದ ಮನೆ ಇದಾಗಿದೆ.
ಮಂಗಳವಾರ ಆರಂಭವಾದ ದಾಳಿ ಈಗಲೂ ಮುಂದುವರಿದಿದೆ. ಬುಧವಾರ ಬೆಳಿಗ್ಗೆ ನೋಟು ಎಣಿಕೆ ಯಂತ್ರಗಳೊಂದಿಗೆ ಆಗಮಿಸಿದ ಬ್ಯಾಂಕ್ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಆಭರಣ, ಬ್ಯಾಂಕ್ ಚೆಕ್ ಪುಸ್ತಕ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಲಿಗೆ, ವಂಚನೆ, ಹಣ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
ಈತ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂದು ಇ.ಡಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.