ಜೈಪುರ/ಮೊಹಾಲಿ: ಪಿಎಸಿಎಲ್ ನಕಲಿ ಕಂಪನಿಯ ₹48,000 ಕೋಟಿ ವಂಚನೆಗೆ ಸಂಬಂಧಿಸಿ ರಾಜಸ್ಥಾನ ಕಾಂಗ್ರೆಸ್‌ನ ಮಾಜಿ ನಾಯಕ ಪ್ರತಾಪ್ ಸಿಂಗ್ ಖಾಚರಿಯಾವಾಸ್ ಮತ್ತು ಪಂಜಾಬ್ ಎಎಪಿ ಶಾಸಕ ಕುಲ್ವಂತ್ ಸಿಂಗ್‌ಗೆ ಸೇರಿದ ಮನೆ, ಕಚೇರಿಗಳ ಮೇಲೆ ಮಂಗಳವಾರ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ಮಾಡಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿ ಇ.ಡಿ. ತನಿಖೆ ಮಾಡುತ್ತಿದೆ.
ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರ ಸೋದರ ಸಂಬಂಧಿ ಖಾಚರಿಯಾವಾಸ್, ರಾಜಸ್ಥಾನದ ಅಶೋಕ್ ಗೆಹಲೋತ್ ಸಂಪುಟದಲ್ಲಿ ವಿವಿಧ ಇಲಾಖೆಗಳನ್ನು ನಿರ್ವಹಿಸಿದ್ದರು. ಅವರ ಮಾಲೀಕತ್ವದ ಜೈಪುರ ಮನೆ ಸೇರಿದಂತೆ 15 ಸ್ಥಳಗಳಲ್ಲಿ ದಾಳಿ ನಡೆದಿದೆ.
ಎಎಪಿ ಶಾಸಕ ಕುಲ್ವಂತ್ ಸಿಂಗ್ ಅವರು ಜನತಾ ಲ್ಯಾಂಡ್ ಪ್ರಮೋಟರ್ಸ್ ಲಿಮಿಟೆಡ್(ಜೆಎಲ್‌ಪಿಎಲ್) ಸಂಸ್ಥಾಪಕರಾಗಿದ್ದು, ₹1000 ಕೋಟಿ ಸಂಪತ್ತಿನೊಂದಿಗೆ ಪಂಜಾಬ್‌ನ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಅವರ ಮೊಹಾಲಿ ನಿವಾಸ ಸೇರಿ ಹಲವೆಡೆ ಇ.ಡಿ. ಅಧಿಕಾರಿಗಳು ಶೋಧ ನಡೆಸಿದರು.
ಇ.ಡಿ. ದಾಳಿಯು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಈ ಕುತಂತ್ರ ಎಂದು ರಾಜಸ್ಥಾನ ಕಾಂಗ್ರೆಸ್ ಆರೋಪ ಮಾಡಿದೆ.
ಏನಿದು ಪ್ರಕರಣ: 2015ರಲ್ಲಿ ನಿರ್ಮಲ್ ಸಿಂಗ್ ಭಾಂಗೋ ಮತ್ತಿತರರ ಒಡೆತನದ ಪಿಎಸಿಎಲ್ ಇಂಡಿಯಾ ಲಿಮಿಟೆಡ್ ವಿರುದ್ಧ ಸಿಬಿಐ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು.
ಪಿಎಸಿಎಲ್ ಮತ್ತು ಅದರ ನಿರ್ದೇಶಕರು ಹೂಡಿಕೆದಾರರಿಂದ ₹48,000 ಕೋಟಿ ಸಂಗ್ರಹಿಸಿ ಹಣವನ್ನು ಖಾಚರಿಯಾವಾಸ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂದು ಇ.ಡಿ. ಹೇಳಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಭಾಂಗೋ ನಿಧನರಾಗಿದ್ದರು. ಅವರಿಗೆ ಸೇರಿದ 706 ಕೋಟಿ ಮೌಲ್ಯದ ಸಂಪತ್ತನ್ನು ಇ.ಡಿ.ಈಗಾಗಲೇ ಜಪ್ತಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.