ADVERTISEMENT

ಮಾಧ್ಯಮ ದಮನ ಬೇಡ ಸಂಪಾದಕರ ಕೂಟ

ಪಿಟಿಐ
Published 7 ಮಾರ್ಚ್ 2019, 17:19 IST
Last Updated 7 ಮಾರ್ಚ್ 2019, 17:19 IST
   

ನವದೆಹಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಬಗ್ಗೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ನೀಡಿದ ಹೇಳಿಕೆಯನ್ನು ಭಾರತೀಯ ಸಂಪಾದಕರ ಕೂಟ ಖಂಡಿಸಿದೆ. ಮಾಧ್ಯಮದ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆಯನ್ನು ಅನ್ವಯ ಮಾಡುವ ಪ್ರಯತ್ನ ಪತ್ರಕರ್ತರಿಂದ ಸುದ್ದಿಯ ಮೂಲ ಕೇಳಿದಷ್ಟೇ ದಮನಕಾರಿ ಎಂದು ಕೂಟ ಹೇಳಿದೆ.

ಮಾಧ್ಯಮಕ್ಕೆ ಬೆದರಿಕೆ ಒಡ್ಡುವಂತಹ ವರ್ತನೆಯನ್ನು ಖಂಡಿಸಿದೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಬಾರದು ಎಂದೂ ಒತ್ತಾಯಿಸಿದೆ.

ರಫೇಲ್‌ ಒಪ್ಪಂದದ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಕಳವಾದ ದಾಖಲೆಗಳನ್ನು ಆಧರಿಸಿದೆ. ಹಾಗಾಗಿ ಅಂತಹ ಅರ್ಜಿಗಳನ್ನು ವಜಾ ಮಾಡಬೇಕು ಎಂದು ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದರು.

ADVERTISEMENT

‘ಕಳವಾದ ದಾಖಲೆಗಳನ್ನು ಬಳಸಿಕೊಂಡ ಪತ್ರಕರ್ತರು ಅಥವಾ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಅಥವಾ ತನಿಖೆ ನಡೆಸುವುದಿಲ್ಲ’ ಎಂದು ವೇಣುಗೋಪಾಲ್‌ ಅವರು ಬಳಿಕ ಸ್ಪಷ್ಟನೆ ನೀಡಿದ್ದರು. ಹಾಗಿದ್ದರೂ, ವೇಣುಗೋಪಾಲ್‌ ಅವರು ನೀಡಿದ್ದ ಹೇಳಿಕೆ ಮಾಧ್ಯಮವನ್ನು ಬೆದರಿಸುವಂತಿತ್ತು ಮತ್ತು ಸ್ವಾತಂತ್ರ್ಯವನ್ನು ದಮನ ಮಾಡುವಂತಿತ್ತು ಎಂದು ಸಂಪಾದಕರ ಕೂಟ ಹೇಳಿದೆ.

ಭಯದ ವಾತಾವರಣ ಸೃಷ್ಟಿ: ನಾಯ್ಡು ಆರೋಪ

ಅಮರಾವತಿ: ರಫೇಲ್‌ ಒಪ್ಪಂದದ ಬಗ್ಗೆ ವರದಿಗಳನ್ನು ಪ್ರಕಟಿಸಿದ ‘ದ ಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅನ್ವಯಿಸುವ ಬೆದರಿಕೆ ಒಡ್ಡುವ ಮೂಲಕ ಅಸಾಂವಿಧಾನಿಕ ಮಾರ್ಗಗಳಿಂದ ಮಾಧ್ಯಮವನ್ನು ಸುಮ್ಮನಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

‘ಎನ್‌. ರಾಮ್‌ ಅವರು ಪ್ರಕಟಿಸಿರುವ ವರದಿಯಲ್ಲಿ ರಫೇಲ್‌ ಒಪ್ಪಂದದ ಬಗ್ಗೆ ಎತ್ತಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಮಾಧ್ಯಮ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವವೇ ಮುರಿದು ಬೀಳುವಂತಹ ಸನ್ನಿವೇಶ ಸೃಷ್ಟಿಸುತ್ತದೆ’ ಎಂದು ನಾಯ್ಡು ಅವರು ಟ್ವೀಟ್‌ ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ ಮತ್ತು ದೇಶವನ್ನು ತಪ್ಪುದಾರಿಗೆಳೆಯಲಾಗಿದೆ. ದೇಶದ ಎಲ್ಲ ಮಹತ್ವದ ಸಂಸ್ಥೆಗಳನ್ನು ನಾಶ ಮಾಡಲಾಗಿದೆ. ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ದ ಹಿಂದೂ’ ಪತ್ರಿಕೆ ಮತ್ತು ವರದಿಗಳನ್ನು ಬರೆದ ಎನ್‌. ರಾಮ್‌ ಅವರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಬಳಸುವ ಬೆದರಿಕೆ ಒಡ್ಡುತ್ತಿದೆ. ಇದು ಸಂವಿಧಾನವು ಕೊಟ್ಟಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರವಾದ ಬೆದರಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.