ನವದೆಹಲಿ: ದೇಶದ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆ ಭಾರತಕ್ಕೆ ಬೇಕು ಮತ್ತು ಶಿಕ್ಷಣ ಎಂಬುದು ‘ಕೆಲವರಿಗಷ್ಟೇ ಲಭಿಸುವ ಸ್ವತ್ತು ಆಗಬಾರದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದಕ್ಷಿಣ ಅಮೆರಿಕದ ಪೆರು ದೇಶದ ಪಾಂಟಿಫಿಕಲ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರು ಸಂವಾದ ನಡೆಸಿದರು.
‘ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಹೊಂದುವ ಪರ್ಯಾಯ ತಯಾರಿಕಾ ವ್ಯವಸ್ಥೆಯೊಂದನ್ನು ನಿರ್ಮಿಸಬೇಕಾಗಿದೆ. ಪೆರು ಅಥವಾ ಅಮೆರಿಕದೊಂದಿಗೆ ಪಾಲುದಾರಿಕೆಯು ಅಂತಹ ವ್ಯವಸ್ಥೆಯ ಸ್ಥಾಪನೆಗೆ ಹಾದಿಯೊದಗಿಸಬಹುದು’ ಎಂದು ರಾಹುಲ್ ಹೇಳಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿದ್ಯಾರ್ಥಿಗಳೊಂದಿಗಿನ ಅವರ ಸಂಭಾಷಣೆಯ ವಿಡಿಯೊವನ್ನೂ ಹಂಚಿಕೊಂಡಿದೆ.
‘ಶಿಕ್ಷಣ ಎಂಬುದು ಕುತೂಹಲ ಮತ್ತು ಯಾವುದೇ ಭಯ ಅಥವಾ ನಿರ್ಬಂಧಗಳಿಲ್ಲದೆ ಮುಕ್ತವಾಗಿ ಯೋಚಿಸುವ ಹಾಗೂ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯದೊಂದಿಗೆ ಪ್ರಾರಂಭವಾಗುತ್ತದೆ. ಶಿಕ್ಷಣವು ಕೆಲವರಿಗಷ್ಟೇ ದೊರೆಯುವ ಸ್ವತ್ತು ಆಗಬಾರದು. ಏಕೆಂದರೆ, ಅದು ಸ್ವಾತಂತ್ರ್ಯದ ತಳಹದಿಯಾಗಿದೆ’ ಎಂದು ಹೇಳಿದ್ದಾರೆ.
ಒಂದು ವಾರದ ವಿದೇಶ ಪ್ರವಾಸದಲ್ಲಿರುವ ರಾಹುಲ್ ಅವರು ಕೊಲಂಬಿಯಾ, ಬ್ರೆಜಿಲ್, ಪೆರು ಮತ್ತು ಚಿಲಿ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.