ADVERTISEMENT

ಮಹದಾಯಿ ‘ವನ್ಯಜೀವಿ’ ತಕರಾರು ಇತ್ಯರ್ಥಕ್ಕೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 11:26 IST
Last Updated 9 ನವೆಂಬರ್ 2023, 11:26 IST
<div class="paragraphs"><p>ಮಹದಾಯಿ (ಪ್ರಾತಿನಿಧಿಕ ಚಿತ್ರ)</p></div>

ಮಹದಾಯಿ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ನಿರ್ಣಾಯಕ ಪ್ರಕ್ರಿಯೆಯಾಗಿರುವ ವನ್ಯಜೀವಿ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಸಲ್ಲಿಸಿದೆ. ಮಂಡಳಿಯ ಸ್ಥಾಯಿ ಸಮಿತಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವವು ಚರ್ಚೆಗೆ ಬರಲಿದೆ. 

ಮಹದಾಯಿಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಯ ಅನುಷ್ಠಾನಕ್ಕೆ 26.92 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಬೇಕಿದೆ. ವನ್ಯಜೀವಿ ಧಾಮದಿಂದ ಈ ಯೋಜನೆಗೆ ನೀರು ಹರಿಸಲಾಗುತ್ತಿದೆ ಎಂದು ಗೋವಾ ಸರ್ಕಾರವು ತಗಾದೆ ಎತ್ತಿದೆ. ಮಹದಾಯಿ ವನ್ಯಜೀವಿ ಧಾಮವನ್ನು ಹುಲಿ ಕಾರಿಡಾರ್‌ ಎಂಬುದಾಗಿ ಘೋಷಿಸುವಂತೆ ಮುಂಬೈ ಹೈಕೋರ್ಟ್‌ ಆದೇಶಿಸಿದೆ. ಹೀಗಾಗಿ, ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ವನ್ಯಜೀವಿ ಅನುಮೋದನೆ ಪಡೆಯುವುದು ಅನಿವಾರ್ಯ. ಜತೆಗೆ, ಇದು ಸಂಕೀರ್ಣ ಪ್ರಕ್ರಿಯೆ ಎಂಬುದು ವನ್ಯಜೀವಿ ತಜ್ಞರ ಅಭಿಮತ. 

ADVERTISEMENT

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಅನುಮೋದನೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆಗೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಜನವರಿ 20ರಂದು ನಿರಾಕರಿಸಿತ್ತು. ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರು ಬೆಳೆಸುವ ಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಯಬೇಕಿದೆ ಹಾಗೂ ಕರ್ನಾಟಕ ಸರ್ಕಾರ ಇನ್ನಷ್ಟು ವಿವರಣೆ ನೀಡಬೇಕು ಎಂದು ಸ್ಪಷ್ಟಪಡಿಸಿತ್ತು. ‍

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ವನ್ಯಜೀವಿ ಅನುಮೋದನೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು. ‘ಯೋಜನೆಗಾಗಿ ಕಾಳಿ ಹುಲಿ ಕಾರಿಡಾರ್‌ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 7.96 ಹೆಕ್ಟೇರ್‌ ಅರಣ್ಯ ಹಾಗೂ 2.71 ಹೆಕ್ಟೇರ್ ಅರಣ್ಯೇತರ ಪ್ರದೇಶ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಸಭೆಯಲ್ಲಿ ತಿಳಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.